ಗಂಗಾವತಿ: ‘ಮಳೆಗಾಲ ಆರಂಭವಾಗಿದ್ದು, ಮನೆ ಸುತ್ತಮುತ್ತ ಹಾಗೂ ಸಾರ್ವಜನಿಕರ ಪ್ರದೇಶದಲ್ಲಿ ಕೊಳಚೆ ನೀರು ಬಹುದಿನಗಳವರೆಗೆ ಸಂಗ್ರಹಗೊಳ್ಳದಂತೆ ಎಚ್ಚರಿಕೆ ವಹಿಸಬೇಕು’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಗೌರಿಶಂಕರ ಹೇಳಿದರು.
ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಆರೋಗ್ಯ ಸ್ವಯಂ ಸೇವಕರಿಗೆ ರೋಗಗಳು ಹರಡದಂತೆ ಎಚ್ಚರ ವಹಿಸಲು ಶನಿವಾರ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಮಳೆಗಾಲದಲ್ಲಿ ಚರಂಡಿ, ರಸ್ತೆ ಗುಂಡಿಗಳು ನೀರಿನಲ್ಲಿ ತುಂಬಿಕೊಳ್ಳುತ್ತವೆ. ಬಹುದಿನಗಳವರೆಗೆ ನೀರು ನಿಂತುಕೊಳ್ಳುವುದರಿಂದ ಕೊಳಚೆಯಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆಗಳ ಕಡಿತದಿಂದ ಮನುಷ್ಯರಿಗೆ ಚಿಕನ್‌ಗೂನ್ಯ, ಡೆಂಗಿಗಳಂತಹ ಮಾರಕ ರೋಗಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ಸ್ವಯಂ ಸೇವಕರು ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರು ನಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸಬೇಕು. ಜತೆಗೆ ಸೊಳ್ಳೆ ಕಡಿತದಿಂದ ಬರುವ ರೋಗಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.
ವೈದ್ಯ ಡಾ.ವಿನೋದಕುಮಾರ ಮಾತನಾಡಿ, ‘ಡೆಂಗಿ, ಚಿಕನ್‌ಗೂನ್ಯಗಳಂತಹ ಕಾಯಿಲೆಗಳು ಸೊಳ್ಳೆ ಕಡಿತದಿಂದ ಬರುವ ಕಾಯಿಲೆಗಳಾಗಿವೆ. ನೀರಿನ ಸಲಕರಣೆಗಳು, ಬಾಟಲ್‌ಗಳು ಭದ್ರವಾಗಿ ಮುಚ್ಚಿರುವಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಕಡಿಯದಂತೆ ಜನರು ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ದೇವೇಂದ್ರಗೌಡ, ಕೆ.ಹನುಮೇಶ ನಾಯಕ, ಸುರೇಶ, ರಮೇಶ, ಎಚ್.ಮಂಜುಳಾ, ಸಾವಿತ್ರಿ, ಅನಿತಾ, ಸ್ನೇಹ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.