ADVERTISEMENT

ವಾಂತಿ–ಭೇದಿ: ದಸ್ತಾಪುರದಲ್ಲಿ ಮನೆ ಮಾಡಿದ ದುಗುಡ

ಕಲುಷಿತ ನೀರು ಕುಡಿದು 42 ಮಂದಿ ಅಸ್ವಸ್ಥ, ಹಲವರ ಆರೋಗ್ಯದಲ್ಲಿ ಚೇತರಿಕೆ, ಆರು ಮಕ್ಕಳಿಗೆ ಮುಂದುವರಿದಿ ಚಿಕಿತ್ಸೆ

ತೀರ್ಥಕುಮಾರ
Published 30 ಸೆಪ್ಟೆಂಬರ್ 2021, 3:47 IST
Last Updated 30 ಸೆಪ್ಟೆಂಬರ್ 2021, 3:47 IST
ಕಮಲಾಪುರ ರಾಲ್ಲೂಕಿನ ದಸ್ತಾಪುರ ಗ್ರಾಮದಲ್ಲಿ ಬುಧವಾರ ವಾಂತಿ– ಭೇದಿ ಉಲ್ಬಣಿಸಿದ ಕಾರಣ ಗ್ರಾಮಸ್ಥರು ಆತಂಕಗೊಂಡರು
ಕಮಲಾಪುರ ರಾಲ್ಲೂಕಿನ ದಸ್ತಾಪುರ ಗ್ರಾಮದಲ್ಲಿ ಬುಧವಾರ ವಾಂತಿ– ಭೇದಿ ಉಲ್ಬಣಿಸಿದ ಕಾರಣ ಗ್ರಾಮಸ್ಥರು ಆತಂಕಗೊಂಡರು   

ದಸ್ತಾಪುರ (ಕಮಲಾಪುರ ತಾ): ವಾಂತಿ– ಭೇದಿ ಉಲ್ಬಣಗೊಂಡಿರುವ ದಸ್ತಾಪುರ ಗ್ರಾಮದಲ್ಲಿ ಈಗ ಸೂತಕದ ಛಾಯೆ ಮನೆ ಮಾಡಿದೆ. ಕಲುಷಿತ ನೀರು ಸೇವನೆಯಿಂದ ಬುಧವಾರ ಇಬ್ಬರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದು, ಜನ ಆತಂಕಗೊಂಡಿದ್ದಾರೆ. ಈವರೆಗೆ ಅಸ್ವಸ್ಥಗೊಂಡಿರುವ 42 ಮಂದಿಯಲ್ಲಿ ಏಳು ಪುಟ್ಟ ಮಕ್ಕಳೂ ಇದ್ದು, ಹೆತ್ತವರಲ್ಲಿ ದುಗುಡ ಮನೆ ಮಾಡಿದೆ.

‌ಕಳೆದ ಒಂದು ವಾರದಿಂದ ಹಲವರಿಗೆ ವಾಂತಿ– ಭೇದಿ ಕಾಣಿಸುತ್ತಲೇ ಇತ್ತು. ಮಂಗಳವಾರ ರಾತ್ರಿ ಪರಿಶಿಷ್ಟರ ಕಾಲೊನಿಯ ಜನರಿಗೆ ಇದ್ದಕ್ಕಿದ್ದಂತೆ ತೀವ್ರವಾಯಿತು. 15 ಮಹಿಳೆಯರು, ಆರು ಮಕ್ಕಳು ಸೆರಿ ಹಲವರು ಅಸ್ವಸ್ಥಗೊಂಡಿದ್ದರಿಂದ ಕಲಬುರ್ಗಿಯ ಜಿಲ್ಲಾ ಆಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪ‍ತ್ರೆಗಳಿಗೆ ದಾಖಲಾದರು. ಅವರಲ್ಲಿ ದ್ರೌಪದಿ (65) ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದರು.

‘ಬುಧವಾರ ಮಧ್ಯಾಹ್ನ ಕಮಲಾಬಾಯಿ (56) ಎಂಬ ಮಹಿಳೆ ತೀವ್ರ ನಿತ್ರಾಣಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲು ಗ್ರಾಮಸ್ಥರು ಆಂಬುಲೆನ್ಸ್‌ಗೆ ಕರೆ ಮಾಡಿದರೂ ಬರಲಿಲ್ಲ. ತಾಲ್ಲೂಕು ವೈದ್ಯಾಧಿಕಾರಿ, ತಹಶೀಲ್ದಾರ್‌ಗೂ ಕರೆ ಮಾಡಿದರು. ಬಳಿಕ ಬಂದ ಆಂಬುಲೆನ್ಸ್‌ನಲ್ಲಿ ಕಮಲಾಬಾಯಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗುವಷ್ಟರಲ್ಲಿ ಅವರು ಕೊನೆಯುಸಿರೆಳೆದರು’ ಎಂದು ಊರವರು ಹೇಳಿದರು.

ADVERTISEMENT

ಕಮಲಾಬಾಯಿ ನಾಗೂರು ಗ್ರಾಮದವರು. ದಸ್ತಾಪುರದಲ್ಲಿರುವ ಮಗಳ ಮನೆಗೆ ಎರಡು ದಿನಗಳ ಹಿಂದಷ್ಟೇ ಅವರು ಬಂದಿದ್ದರು. ಹುಟ್ಟಿದಾಗಿನಿಂದಲೂ ಮೂಕರಾಗಿದ್ದ ಅವರು, ಗ್ರಾಮದ ಸಮುದಾಯ ಭವನದ ಮುಂದೆಯೇ ನರಳಾಡಿ ಜೀವಬಿಟ್ಟರು. ಇದರಿಂದ ಸ್ಥಳದಲ್ಲಿ ಸೇರಿದ ಜನ ಆರೋಗ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ತಹಶೀಲ್ದಾರ್‌ ಅಂಜುಮ್‌ ತಬಸುಮ್‌, ಡಾ.ಮಾರುತಿ ಕಾಂಬಳೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಮಂಜುನಾಥ ಬುಧವಾರ ಮಧ್ಯಾಹ್ನ ಸ್ಥಳಕ್ಕೆ ಬಂದರು. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲದ ಕಾರಣ, ಸಮುದಾಯ ಭವನದಲ್ಲೇ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಮಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೇತನ ಹೊಳಗುಂದಾ ರಾತ್ರಿ ಊರಿನಲ್ಲೇ ಇದ್ದು ಜನರನ್ನು ಆಸ್ಪತ್ರೆಗೆ ಸಾಗಿಸಿದರು.

ಘಟನೆಗೆ ಕಾರಣ: ಗ್ರಾಮದ ಮಧ್ಯೆ ಗಂಡೋರಿ ನಾಲಾದ ಹೊಳೆ ಹರಿದಿದ್ದು ಎಡಭಾಗದಲ್ಲಿ ಪರಿಶಿಷ್ಟ ಸಮುದಾಯದ ಕಾಲೊನಿ, ಬಲಭಾಗದಲ್ಲಿ ಹಳೆಯ ಊರು ಇದೆ. ಹೊಳೆಯ ಅಂಚಿನಲ್ಲೇ ಬೋರ್‌ವೆಲ್‌ ಕೊರೆದು, ಪೈಪ್‌ಲೈನ್‌ ಎಳೆಯಾಗಿದೆ. ಹಲವು ವರ್ಷಗಳ ಹಿಂದೆ ಅಳವಡಿಸಿದ ಈ ಕಬ್ಬಿಣದ ಪೈಪ್‌ಪೈಲ್‌ಗಳು ಎಲ್ಲೆಂದರಲ್ಲಿ ತೂತುಬಿದ್ದಿವೆ. ಈ ಕಿಂಡಿಗಳ ಮೂಲಕ ಹೊಳೆಯ ಕಲುಷಿತ ನೀರು ಸೇರಿಕೊಂಡು ಕುಡಿಯುವ ನೀರಿನ ಟ್ಯಾಂಕಿಗೆ ಬಂದು ಸೇರುತ್ತಿದೆ.

ಪದೇಪದೇ ನಡೆಯುತ್ತಿದೆ: ಈ ಗ್ರಾಮದಲ್ಲಿ ವಾಂತಿ– ಭೇದಿ ಪ್ರಕರಣ ಇದೇ ಮೊದಲೇನಲ್ಲ. 2010ರಲ್ಲಿಯೂ ಇದೇ ರೀತಿ ಕಲುಷಿತ ನೀರಿನಿಂದ ಕಾಲರಾ ಬಂದು, ಇಡೀ ಊರಿನ ಜನ ಸಂಕಷ್ಟ ಎದುರಿಸಿದ್ದರು. 2016ರಲ್ಲಿ ಮತ್ತೆ ನಾಲ್ವರು ವಿವಿಧ ಕಾಯಿಲೆಯಿಂದ ಮೃತಪಟ್ಟಿದ್ದಾರೆ.

ಈ ಬಾರಿ ಗ್ರಾಮಸ್ಥರು ರಾತ್ರಿಯೇ ಹಲವರನ್ನು ಆಸ್ಪತ್ರೆಗೆ ಸಾಗಿಸಿದ್ದರಿಂದ ಹೆಚ್ಚಿನ ಅವಘಡ ತಪ‍್ಪಿದೆ. ಊರಿನಲ್ಲಿ ಪುಟ್ಟ ಮಕ್ಕಳನ್ನು ಮಡಿಲಲ್ಲಿ ಹಾಕಿಕೊಂಡು ಔಷಧೋಪಚಾರ ಮಾಡುವ ಮಹಿಳೆಯರ ಕಷ್ಟ ನೋಡದಾಗಿದೆ. ಇಷ್ಟೆಲ್ಲದರ ಆಚೆಗೂ ಕಲುಷಿತಗೊಂಡಿದ್ದ ಟ್ಯಾಂಕಿನ ನೀರನ್ನೇ ಜನರು ಇನ್ನೂ ಬಳಸುವುದು ಅನಿವಾರ್ಯವಾಗಿದೆ.

*

ತಲಾ ₹ 2 ಲಕ್ಷ ಪರಿಹಾರ, ಶುದ್ಧ ನೀರು

‘ದಸ್ತಾಪುರದ ಸ್ಥಿತಿ ನನಗೆ ತಡವಾಗಿ ಗಮನಕ್ಕೆ ಬಂದಿದೆ. ಮೃತಟಪ್ಟವರ ಕುಟುಂಬಕ್ಕೆ ತಲಾ ₹ 2 ಲಕ್ಷ ನನ್ನ ಕಡೆಯಿಂದ ನೀಡುತ್ತೇವೆ. ಸರ್ಕಾರದಿಂದ ಬರುವ ಪ‍ರಿಹಾರವನ್ನೂ ಕೊಡಿಸುತ್ತೇನೆ. ಗ್ರಾಮದಲ್ಲಿ ಶುದ್ಧ ನೀರಿನ ಘಟಕವನ್ನು ತಕ್ಷಣ ಮಂಜೂರು ಮಾಡುತ್ತೇನೆ. ಅಲ್ಲಿಯವರೆಗೆ ಶುದ್ಧೀಕರಿಸಿದ ನೀರಿನ ಕ್ಯಾನ್‌ಗಳನ್ನು ಉಚಿತವಾಗಿ ಸರಬರಾಜು ಮಾಡಿಸುತ್ತೇನೆ. ಗ್ರಾಮದಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು, ಒಂದು ಆಂಬುಲೆನ್ಸ್‌ ನಿಯೋಜನೆ ಮಾಡಿದ್ದೇನೆ.

–ಬಸವರಾಜ ಮತ್ತಿಮೂಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.