ADVERTISEMENT

ಮಳೆಗೆ ಕೊಚ್ಚಿಹೋದ ಕೋಳೂರು ಬಾಂದಾರ

ಜಿಲ್ಲೆಯಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 6:17 IST
Last Updated 12 ಅಕ್ಟೋಬರ್ 2020, 6:17 IST
ಕೊಪ್ಪಳ ತಾಲ್ಲೂಕಿನ ಕೋಳೂರು ಬಳಿ ಹಿರೇಹಳ್ಳಕ್ಕೆ ನಿರ್ಮಿಸಿದ ಬಾಂದಾರ ಶನಿವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಕಿತ್ತುಕೊಂಡು ಹೋಗಿದೆ. ಬಾಂದಾರ ಗೇಟ್ ತೆರೆಯದ ಕಾರಣ ಒತ್ತಡದಿಂದ ಜಮೀನುಗಳಿಗೆ ನುಗ್ಗಿ ಸೇತುವೆಯ ಪಾರ್ಶ್ವ ಭಾಗ ಸಂಪೂರ್ಣ ಕುಸಿದಿದೆ (ಎಡಚಿತ್ರ) ಹಿರೇಹಳ್ಳದ ಪ್ರವಾಹದಿಂದಾಗಿ ಮಂಗಳಾಪುರ ಗ್ರಾಮದ ಹತ್ತಿ ಹೊಲದಲ್ಲಿ ನೀರು ನಿಂತಿರುವುದನ್ನು ವೀಕ್ಷಿಸುತ್ತಿರುವ ರೈತ     ಪ್ರಜಾವಾಣಿ ಚಿತ್ರಗಳು: ಭರತ್ ಕಂದಕೂರ
ಕೊಪ್ಪಳ ತಾಲ್ಲೂಕಿನ ಕೋಳೂರು ಬಳಿ ಹಿರೇಹಳ್ಳಕ್ಕೆ ನಿರ್ಮಿಸಿದ ಬಾಂದಾರ ಶನಿವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಕಿತ್ತುಕೊಂಡು ಹೋಗಿದೆ. ಬಾಂದಾರ ಗೇಟ್ ತೆರೆಯದ ಕಾರಣ ಒತ್ತಡದಿಂದ ಜಮೀನುಗಳಿಗೆ ನುಗ್ಗಿ ಸೇತುವೆಯ ಪಾರ್ಶ್ವ ಭಾಗ ಸಂಪೂರ್ಣ ಕುಸಿದಿದೆ (ಎಡಚಿತ್ರ) ಹಿರೇಹಳ್ಳದ ಪ್ರವಾಹದಿಂದಾಗಿ ಮಂಗಳಾಪುರ ಗ್ರಾಮದ ಹತ್ತಿ ಹೊಲದಲ್ಲಿ ನೀರು ನಿಂತಿರುವುದನ್ನು ವೀಕ್ಷಿಸುತ್ತಿರುವ ರೈತ     ಪ್ರಜಾವಾಣಿ ಚಿತ್ರಗಳು: ಭರತ್ ಕಂದಕೂರ   

ಕೊಪ್ಪಳ: ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಜಿಟಿಜಿಟಿ ಮಳೆಯೊಂದಿಗೆ ಆರಂಭವಾಗಿ ಭಾನುವಾರ ಬೆಳಗಿನ ಜಾವದವರೆಗೆ ಸುರಿದಿದೆ. ಪರಿಣಾಮವಾಗಿ ಜಿಲ್ಲೆಯ ಹಳ್ಳಕೊಳ್ಳಗಳು ಮಳೆಗೆ ತುಂಬಿ ಹರಿದು ಜನರಲ್ಲಿ ಆತಂಕ ಮೂಡಿಸಿದೆ.

ಕೊಪ್ಪಳ, ಕುಕನೂರು ತಾಲ್ಲೂಕಿನ ಬಹುತೇಕ ಜಮೀನುಗಳಿಗೆ ನೀರು ನುಗ್ಗಿದೆ. ಹತ್ತಿ, ಶೇಂಗಾ, ಈರುಳ್ಳಿ, ಮೆಕ್ಕೆಜೋಳ, ಮುಂಗಾರು ಜೋಳ, ಸಜ್ಜೆ ಸಂಪೂರ್ಣ ನೆಲಕಚ್ಚಿವೆ. ಜಮೀನುಗಳಿಗೆ ಹೋಗುವ ದಾರಿಯಲ್ಲಿ ಕೂಡಾ ಮಳೆಯ ನೀರು ನಿಂತಿದ್ದು, ಕೃಷಿ ಕಾರ್ಯಕ್ಕೆ ಮತ್ತಷ್ಟು ತೊಂದರೆಯಾಗಿದೆ.

ಹಿರೇಹಳ್ಳವನ್ನು ಗವಿಮಠದ ಸ್ವಾಮೀಜಿಗಳು ಪುನಶ್ಚೇತನಗೊಳಿಸಿದ ನಂತರ 21 ಕಿ.ಮೀ ನೀರು ಸರಾಗವಾಗಿ ಸಾಗುತ್ತಿದೆ. ಅಲ್ಲದೆ ದಶಕದಿಂದ ನೀರನ್ನೇ ಕಾಣದ ಹಳ್ಳ ಸಂಪೂರ್ಣ ತುಂಬಿಕೊಂಡು ಹೊರಚೆಲ್ಲಿದೆ. ಹಳ್ಳದ ಪಾತ್ರದ 30ಕ್ಕೂ ಹೆಚ್ಚು ಗ್ರಾಮ ಮತ್ತು ಜಮೀನುಗಳಲ್ಲಿ ನೀರು ಬಂದಿದೆ.

ADVERTISEMENT

ಕೋಳೂರು ಸೇತುವೆ ಹಾಳು: ಹಿರೇಹಳ್ಳಕ್ಕೆ ಮೊದಲ ಬಾರಿಗೆ ಶಿವರಾಜ ತಂಗಡಗಿ ಸಣ್ಣ ನೀರಾವರಿ ಸಚಿವರಾಗಿ ದ್ದಾಗ ಕೋಳೂರು ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣ ಮಾಡಲಾಗಿತ್ತು. ಇದು ನೂರಾರು ರೈತರಿಗೆ ಪರಿಣಾಮಕಾರಿ ಯಾಗಿ ಉಪಯೋಗಕ್ಕೆ ಬಂದಿತ್ತು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಸೇತುವೆ ಹಾಳಾಗಿದೆ.

ಹಿರೇಹಳ್ಳಕ್ಕೆ ಮುದ್ಲಾಪುರ ಬಳಿ ಜಲಾಶಯವನ್ನು ನಿರ್ಮಾಣ ಮಾಡಲಾಗಿದ್ದು, ದಶಕದ ನಂತರ ಸಂಪೂರ್ಣ ತುಂಬಿದೆ. ನಾಲ್ಕು ಕ್ರಸ್ಟ್‌ಗೇಟ್‌ಗಳನ್ನು ತೆಗೆದು ನೀರನ್ನು ಹಳ್ಳಕ್ಕೆ ಬಿಡಲಾಗಿದೆ. ಮಳೆಯ ನೀರು ಸೇರಿ ಪ್ರವಾಹೋಪಾದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕೋಳೂರು ಬಳಿಯ ಬಾಂದಾರದ ಗೇಟ್‌ಗಳನ್ನು ತೆರೆಯದ ಪರಿಣಾಮ ಒತ್ತಡ ಉಂಟಾಗಿ ರೈತರ ಅರ್ಧ ಎಕರೆಯಷ್ಟು ಜಮೀನು ಕೊರೆದುಕೊಂಡು ಹಳ್ಳ ಮುಂದಕ್ಕೆ ಹರಿದಿದೆ. ಪರಿಣಾಮವಾಗಿ ಬಾಂದಾರದ ಪಾರ್ಶ್ವ ಭಾಗ ಕುಸಿದಿದೆ. ಅನೇಕ ರೈತರಿಗೆ ಉಪಯೋಗವಾಗಿದ್ದ ಈ ಸೇತುವೆ ಸ್ಥಳೀಯ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯದಿಂದ ಗೇಟ್‌ ತೆಗೆಯದೇ ಬಿಟ್ಟಿದ್ದರಿಂದ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಬಾಂದಾರ ಹಾಳಾಗಿ ಹೋಗಿದೆ.

ಸುತ್ತಮುತ್ತಲಿನ ಗ್ರಾಮಸ್ಥರು, ರೈತರು, ನಿವಾಸಿಗಳು ಸಂಬಂಧಿಸಿದವರ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿರುವುದು ಕಂಡುಬಂತು.

ಕಿತ್ತುಹೋದ ಹೆದ್ದಾರಿ: ನಿರಂತರ ಮಳೆಗೆ ಗುತ್ತಿ-ಅಂಕೋಲ ರಾಷ್ಟ್ರೀಯ ಹೆದ್ದಾರಿ ಮುನಿರಾಬಾದ್ ಸಮೀಪದ ಹಿಟ್ನಾಳ ಗ್ರಾಮದ ಬಳಿ ಕಿತ್ತುಕೊಂಡು ಹೋಗಿದೆ. ನಿತ್ಯ ಸಾವಿರಾರು ಕ್ವಿಂಟಲ್‌ ಭಾರ ಹೊತ್ತ ಲಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ನೂರಾರು ಕಾರ್ಖಾನೆಗಳು ಈ ಮಾರ್ಗದಲ್ಲಿ ಇವೆ. ಕಾರ್ಮಿಕರಿಗೆ ಕೂಡಾ ತೊಂದರೆ ಯಾಗಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.

ರಸ್ತೆ ಬದಿ ಸರಾಗವಾಗಿ ನೀರು ಹರಿದು ಹೋಗದ ಪರಿಣಾಮ ಜಮೀನುಗಳು ನುಗ್ಗಿವೆ.

ಕೋಳೂರ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಂಸದ ಸಂಗಣ್ಣ ಕರಡಿ ಭೇಟಿ ನೀಡಿ ವೀಕ್ಷಿಸಿದರು. ಅಲ್ಲದೆ ತೊಂದರೆಗೆ ಒಳಗಾದ ಜನರಿಗೆ ತಕ್ಷಣ ಪರಿಹಾರ ನೀಡುವಂತೆ ತಹಶೀಲ್ದಾರ್‌ ಅವರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.