ಕುಷ್ಟಗಿ ತಾಲ್ಲೂಕು ಮುದೇನೂರು-ರಾಮತ್ನಾಳ ಗ್ರಾಮಗಳ ನಡುವೆ ಇರುವ ಹಳ್ಳ ತುಂಬಿ ಹರಿಯುತ್ತಿರುವುದು
ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುರಿದ ಮಳೆಗೆ ಹೊಲಗದ್ದೆಗಳು ಕೆರೆಗಳಂತೆ ಗೋಚರಿಸಿದವು.
ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆವರೆಗೂ ಮಳೆ ನಿರಂತರವಾಗಿ ಸುರಿಯತ್ತಿದ್ದು, ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿವೆ. ಒಡ್ಡುಗಳು ಒಡೆದು ಹೊಲಗಳ ಮೇಲ್ಮಣ್ಣು ಕೊಚ್ಚಿಹೋಗಿದೆ.
ಬಿಡುವಿಲ್ಲದೆ ಸುರಿದ ಮಳೆಯಿಂದಾಗಿ ಪಟ್ಟಣದಲ್ಲಿ ಜನರು ತೊಂದರೆ ಅನುಭವಿಸಿದರು. ಸಂತೆ ಮೈದಾನ ಕೆಸರುಗದ್ದೆಯಂತಾಗಿ ತರಕಾರಿಗಳು ನೀರಿನಲ್ಲಿ ಮುಳುಗಿದ್ದವು. ಸಂಗ್ರಹಿಸಲಾಗಿದ್ದ ಈರುಳ್ಳಿ ಮೂಟೆಗಳು ನೀರಿನಿಂದ ಒದ್ದೆಯಾಗಿ ವ್ಯಾಪಾರಿಗಳು ಮತ್ತು ರೈತರಿಗೆ ಬಹಳಷ್ಟು ಹಾನಿ ಸಂಭವಿಸಿದೆ. ತರಕಾರಿ ಮಾರಾಟವಾಗದೆ ರೈತರು ಆರ್ಥಿಕ ನಷ್ಟ ಅನಭವಿಸಿದರು ಎಂದು ತರಕಾರಿ ದಲ್ಲಾಳಿ ವರ್ತಕ ಶರಣಪ್ಪ ಹಳ್ಳಿಗುಡಿ ಹೇಳಿದರು.
ಮಳೆಯಿಂದ ಪಟ್ಟಣದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಚರಂಡಿಗಳು ಭರ್ತಿಯಾಗಿ ಹರಿದು ಕೊಳಚೆಯಿಂದ ಮುಕ್ತಗೊಂಡವು. ಅಲ್ಲದೆ ಗ್ರಾಮಾಂತರ ಪ್ರದೇಶದಲ್ಲಿಯೂ ಮಳೆಯಿಂದ ಜನಜೀವನ ತೊಂದರೆಗೆ ಈಡಾಗಿದ್ದು ಮಣ್ಣಿನ ಮನೆಗಳಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.