ADVERTISEMENT

ಕೊಪ್ಪಳ | ಚುರುಕಾದ ಮಳೆ; ಚರಂಡಿ ಮೇಲೆ ನೀರು, ಬೆಳೆಗಳಿಗೂ ಹಾನಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:44 IST
Last Updated 10 ಆಗಸ್ಟ್ 2025, 2:44 IST
ಕೊಪ್ಪಳದ ಗಂಜ್ ವೃತ್ತದಲ್ಲಿ ಶನಿವಾರ ಮಳೆಯಿಂದಾಗಿ ರಸ್ತೆ ಮೇಲೆ ಹರಿದ ಚರಂಡಿ‌ ನೀರು
ಕೊಪ್ಪಳದ ಗಂಜ್ ವೃತ್ತದಲ್ಲಿ ಶನಿವಾರ ಮಳೆಯಿಂದಾಗಿ ರಸ್ತೆ ಮೇಲೆ ಹರಿದ ಚರಂಡಿ‌ ನೀರು   

ಕೊಪ್ಪಳ: ಜಿಲ್ಲಾ ಕೇಂದ್ರದಲ್ಲಿ ಶನಿವಾರ ಬಿರುಸಿನ ಮಳೆಯಾಗಿದ್ದು ಅಶೋಕ ವೃತ್ತದಿಂದ ಗಂಜ್‌ ಸರ್ಕಲ್‌ಗೆ ಹೋಗುವ ಮಾರ್ಗದ ಒಂದು ಬದಿಯುದ್ದಕ್ಕೂ ಚರಂಡಿ ನೀರು ರಸ್ತೆಯ ಮೇಲೆ ಹರಿಯಿತು.

ಎರಡು ದಿನಗಳಿಂದ ಇಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಶುಕ್ರವಾರ ಮಧ್ಯಾಹ್ನ 3.50ರ ಸುಮಾರಿಗೆ ಆರಂಭವಾದ ಮಳೆಯಾದರೂ ಸಂಜೆ 6 ಗಂಟೆ ತನಕ ಸುರಿಯಿತು. ಬಳಿಕವೂ ಜಿಟಿಜಿಟಿಯಾಗಿಯೇ ಮುಂದುವರಿದಿತ್ತು. ಉತ್ತಮ ಮಳೆಯಿಂದಾಗಿ ತಾಲ್ಲೂಕಿನ ಹಿರೇಹಳ್ಳ ಜಲಾಶಯ ಭರ್ತಿಯಾಗಿ ನೀರು ಹೊರಬಿಡಲಾಗಿದೆ.

ನಗರದಲ್ಲಿ ಮುಖ್ಯರಸ್ತೆಯ ಮೇಲೆ ಹರಿದ ಚರಂಡಿ ನೀರಿನ ಮೇಲೆಯೇ ವಾಹನಗಳ ಸವಾರರು ಓಡಾಡಬೇಕಾಯಿತು. ಪಕ್ಕದಲ್ಲಿದ್ದ ವಾಹನಗಳ ಸವಾರರಿಗೂ ಚರಂಡಿ ನೀರು ಸಿಡಿದವು. ಜಿಲ್ಲಾಕೇಂದ್ರದಲ್ಲಿ ಸ್ವಲ್ಪ ಬಿರುಸಿನ ಮಳೆಯಾದರೆ ಸಾಕು ಚರಂಡಿಯಲ್ಲಿ ತುಂಬಿರುವ ಕಸ ರಸ್ತೆಯ ಮೇಲೆ ಹರಿಯುತ್ತದೆ. ಇದರಿಂದ ಸಂಚಾರಕ್ಕೂ ತೊಂದರೆಯಾಗುತ್ತದೆ.

ADVERTISEMENT

ಅಳವಂಡಿ ವರದಿ: ಹಿರೇಹಳ್ಳ ಜಲಾಶಯದಿಂದ ನೀರು ಹೊರಬಿಟ್ಟ ಪರಿಣಾಮ ರೈತರು ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ನೀರು ಹೊಕ್ಕು ಬೆಳೆಗೆ ಹಾನಿಯಾಗಿದೆ.  

ಹಿರೇಹಳ್ಳದ ಅಕ್ಕಪಕ್ಕದ ರೈತರ ಜಮೀನುಗಳಲ್ಲಿ ಬೆಳೆದ ಈರುಳ್ಳಿ, ಮೆಕ್ಕೆಜೋಳ, ಟೊಮೋಟೊ ಹಾಗೂ ಬಾಳೆಹಣ್ಣು ಬೆಳೆದ ಜಮೀನಿನಲ್ಲಿ ಹಿರೇಹಳ್ಳದ ನೀರು ಆವೃತವಾಗಿದೆ. ಸರ್ಕಾರ ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಮುನಿರಾಬಾದ್‌ ವರದಿ: ನಿರಂತರ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿರುವ ಕಾರಣ ತಾಲ್ಲೂಕಿನ ಬೇವಿನಹಳ್ಳಿ ಭಾಗದ ರೈತರು ಜಮೀನಿಗೆ ತೆರಳಲು ಬಳಸುತ್ತಿದ್ದ ರಸ್ತೆ ಬಂದಾಗಿದೆ.

ಗಿಣಿಗೇರಿ ದೊಡ್ಡ ಕೆರೆಯಿಂದ ಹರಿಯುವ ಹೆಚ್ಚುವರಿ ನೀರು, ಮಧ್ಯದಲ್ಲಿ ಸೇರುವ ಮಳೆ ನೀರಿನ ಪರಿಣಾಮ ಗಿಣಿಗೇರಿ ಭಾಗದಿಂದ ಹರಿಯುತ್ತ ತುಂಗಭದ್ರಾ ನದಿಗೆ ಸೇರುವ ಹಳ್ಳ ಇದಾಗಿದ್ದು, ಶನಿವಾರವೂ ತುಂಬಿ ಹರಿಯಿತು. ಬೇವಿನಹಳ್ಳಿ, ಲಿಂಗದಹಳ್ಳಿ ಮತ್ತು ಶಹಾಪುರ ಗ್ರಾಮದ ರೈತರ ಜಮೀನುಗಳಿಗೆ ತೆರಳಲು ಸಮಸ್ಯೆಯಾಗಿದೆ.

ಆದ್ದರಿಂದ ಈ ಭಾಗದಲ್ಲಿ ಸೇತುವೆ ನಿರ್ಮಿಸಬೇಕು ಎಂದು ಜನ ಒತ್ತಾಯಿಸಿದರೂ ಬೇಡಿಕೆ ಈಡೇರಿಲ್ಲ. ತಾತ್ಕಾಲಿಕ ಸೇತುವೆ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದರು. ಆದರೆ ಇದು ಇನ್ನೂ ಮರೀಚಿಕೆಯಾಗಿದೆ. ಸೊಂಟದವರೆಗೆ ಹರಿಯುವ ನೀರು ರೈತರನ್ನು ಜಮೀನಿನಿಂದ ಬೇರ್ಪಡಿಸಿದೆ ಎಂದು ರೈತ ಮುಖಂಡರಾದ ಮನೋಜ ಕುಮಾರ ಮಡ್ಡಿ, ಮಂಜುನಾಥ ಅಡಿಗಿ, ರವಿಕುಮಾರ ಅಡಿಗಿ, ಪರಸಪ್ಪ ಮಡ್ಡಿ ಹೇಳಿದರು.  

ಕೊಪ್ಪಳ ತಾಲ್ಲೂಕಿನ ಹಿರೇಹಳ್ಳದಲ್ಲಿನ ಬ್ರಿಡ್ಜ್‌ ಕಂ ಬ್ಯಾರೇಜ್‌ ಬಳಿ ಶನಿವಾರ ಕಂಡ ಹಿರೇಹಳ್ಳದ ನೀರಿನ ಹರಿವು

ಕೊಪ್ಪಳದಲ್ಲಿ ನಾಳೆ ರಸಗೊಬ್ಬರ ವಿತರಣೆ

ಕೊಪ್ಪಳ: ನಗರದ ಗಂಜ್ ಸರ್ಕಲ್ ಆವರಣದಲ್ಲಿ ಇರುವ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತದ ಸೊಸೈಟಿಯಲ್ಲಿ ಸೋಮವಾರ ಯೂರಿಯಾ ಗೊಬ್ಬರ ವಿತರಣೆ ಮಾಡಲಾಗುವುದು ಎಂದು ಕೃಷಿ ಇಲಾಖೆ ತಿಳಿಸಿದೆ. ರಸಗೊಬ್ಬರ ಖರೀದಿಸಲು ಇಚ್ಛಿಸುವ ರೈತರು ಕಡ್ಡಾಯವಾಗಿ ಜಮೀನು ಹೊಂದಿರುವ ರೈತನ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಗೂ ಪಹಣಿ ಪ್ರತಿ ತರಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ರಸಗೊಬ್ಬರ ನೀಡಲಾಗುತ್ತದೆ. ರೈತರ ಹೆಸರಿನಲ್ಲಿ ವಂಚನೆ ಎಸಗುವವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕೊಪ್ಪಳ ತಾಲ್ಲೂಕಿನ ಬೇವಿನಹಳ್ಳಿ ಬಳಿ ನಿಂತಿರುವ ನೀರಿನಲ್ಲಿ ರೈತನ ಪರದಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.