ADVERTISEMENT

ರಾಯನಕೆರೆ ಕಾಲುವೆ ಪತ್ತೆಗೆ ಹಿಂದೇಟು

ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:00 IST
Last Updated 3 ಜುಲೈ 2025, 15:00 IST

ಕುಷ್ಟಗಿ: ತಾಲ್ಲೂಕಿನ ತಾವರಗೇರಾ ಗ್ರಾಮದಲ್ಲಿನ ರಾಯನಕೆರೆ ಕಾಲುವೆ ನಾಪತ್ತೆಯಾಗಿದ್ದರೂ ಅದನ್ನು ಪತ್ತೆ ಹಚ್ಚಿ ಅಕ್ರಮ ಎಸಗಿದವರ ವಿರುದ್ಧ ಕ್ರಮ ಜರುಗಿಸಬೇಕಿದ್ದ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ.

ಸಣ್ಣ ನೀರಾವರಿ ಇಲಾಖೆಗೆ ಸೇರಿದ ರಾಯನಕೆರೆ ಸಂಬಂಧಿಸಿದಂತೆ ನೀರಾವರಿ ಉದ್ದೇಶದಿಂದ ವಿವಿಧ ಸರ್ವೆ ಸಂಖ್ಯೆಗಳ ಜಮೀನುಗಳನ್ನು ಭೂ ಸ್ವಾಧೀನಪಡಿಸಿಕೊಂಡು ನೀರಾವರಿ ಕಾಲುವೆ ನಿರ್ಮಿಸಲಾಗಿತ್ತು. ಆದರೆ ಕಾಲುವೆಯಲ್ಲಿ ನೀರು ಹರಿಯದಿದ್ದರೂ ಸರ್ಕಾರದ ಲಕ್ಷಾಂತರ ಹಣ ನೀರಿನಲ್ಲಿ ಹೋಮ ಮಾಡಿದಂತೆ ವ್ಯರ್ಥವಾಗಿ ಸರ್ಕಾರದ ಆಶಯ ಮಣ್ಣುಪಾಲಾಗಿತ್ತು. ನೀರು ಹರಿಯದಿದ್ದರೂ ಪರಿಹಾರ ಕೊಟ್ಟು ಭೂ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನಾದರೂ ಉಳಿಸಿಕೊಳ್ಳುವಲ್ಲಿಯೂ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ ವಹಿಸುತ್ತ ಬಂದಿದೆ ಎನ್ನುವ ಆರೋಪವಿದೆ.

ನೀರು ಹರಿಯದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವ್ಯಕ್ತಿಗಳು ಸರ್ಕಾರದಿಂದ ಪರಿಹಾರ ಪಡೆದರೂ ಸರ್ಕಾರಕ್ಕೆ ಸೇರಿದ ಕಾಲುವೆಯನ್ನೇ ಗುಳುಂ ಮಾಡಿ ಅದರ ಮೇಲೆಯೇ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡಿರುವ ಕುರಿತು ಸರ್ಕಾರಕ್ಕೆ ಸಾರ್ವಜನಿಕರಿಂದ ಜಿಲ್ಲಾಡಳಿತಕ್ಕೆ ದೂರು ಸಲ್ಲಿಕೆಯಾಗಿದೆ. 

ADVERTISEMENT

ಈ ವಿಷಯ ಕುರಿತು 'ಪ್ರಜಾವಾಣಿ' ವಿಶೇಷ ವರದಿ ಗಮನಸೆಳೆದ ನಂತರ ಎಚ್ಚೆತ್ತುಕೊಂಡ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರಾದರೂ ಕಾಲುವೆ ಎಲ್ಲಿದೆ? ಎಂಬುದೇ ತಿಳಿಯದೆ ಅಸಹಾಯಕರಾಗಿದ್ದರು. 

ಬರೀ ಪತ್ರ ವ್ಯವಹಾರ: 'ಪ್ರಜಾವಾಣಿ' ವರದಿ ಉಲ್ಲೇಖಿಸಿ ಭೂ ಮಾಪನ ಇಲಾಖೆಗೆ ಕಳೆದ ಫೆ.14 ರಂದು ಪತ್ರ ಬರೆದ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾಯನಕೆರೆ ಎಡದಂಡೆ, ಬಲದಂಡೆ ಕಾಲುವೆ, ಕೆರೆ ಟೈಲ್‌ ಚನಲ್‌ಗಳನ್ನು ಸರ್ವೆ ಮಾಡಿ ಹದ್ದುಬಸ್ತು ಮಾಡಿಕೊಡುವಂತೆ ಕೋರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.