ADVERTISEMENT

ಇಳುವರಿ ಮೌಲ್ಯ ವೃದ್ಧಿಯಿಂದ ಅಧಿಕ ಆದಾಯ: ಮೋಹನ್ ಕುಮಾರ್

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 13:51 IST
Last Updated 25 ಜುಲೈ 2022, 13:51 IST
‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮದಲ್ಲಿ ತಿಪಟೂರಿನ ‘ಹೇಮಾದ್ರಿ ನ್ಯಾಚುರಲ್ಸ್‍’ನ ಸ್ಥಾಪಕ ಹಾಗೂ ಕೃಷಿಕ ಮೋಹನ್ ಕುಮಾರ್ ಮಾತನಾಡಿದರು
‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮದಲ್ಲಿ ತಿಪಟೂರಿನ ‘ಹೇಮಾದ್ರಿ ನ್ಯಾಚುರಲ್ಸ್‍’ನ ಸ್ಥಾಪಕ ಹಾಗೂ ಕೃಷಿಕ ಮೋಹನ್ ಕುಮಾರ್ ಮಾತನಾಡಿದರು   

ಕೊಪ್ಪಳ: ‘ಕೃಷಿ ಉತ್ಪನ್ನವನ್ನು ಅದರ ಮೂಲ ಸ್ವರೂಪದಲ್ಲಿ ಮಾರಾಟ ಮಾಡುವ ಬದಲಿಗೆ, ಅದರ ಮೌಲ್ಯವರ್ಧನೆ ಮಾಡಿದರೆ ರೈತರು ಹೆಚ್ಚು ಆದಾಯ ಗಳಿಸಲು ಸಾಧ್ಯ’ ಎಂದು ತಿಪಟೂರಿನ ‘ಹೇಮಾದ್ರಿ ನ್ಯಾಚುರಲ್ಸ್‍’ನ ಸ್ಥಾಪಕ ಹಾಗೂ ಕೃಷಿಕ ಮೋಹನ್ ಕುಮಾರ್ ಸಲಹೆ ನೀಡಿದರು.

ಕನಕಗಿರಿ ತಾಲ್ಲೂಕಿನ ಮುಸಲಾಪುರದ ‘ಪ್ರಾಣಾ ನ್ಯಾಚುರಲ್ ಫಾರ್ಮ್’ನಲ್ಲಿ ಭಾನುವಾರ ನಡೆದ ‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮದ 19ನೇ ಆವೃತ್ತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿ ‘ಇಳುವರಿ ಬೆಲೆ ಹೆಚ್ಚಿಸಲು ಮೌಲ್ಯವರ್ಧನೆಯೊಂದೇ ದಾರಿ. ಇತ್ತೀಚಿನ ದಿನಗಳಲ್ಲಿ ಮೌಲ್ಯವರ್ಧನೆಯ ಹಲವು ಪ್ರಯೋಗಗಳು ಗ್ರಾಹಕರನ್ನು ಸೆಳೆಯುತ್ತಿವೆ; ಅದೇ ಸಮಯಕ್ಕೆ ರೈತರ ಆದಾಯಕ್ಕೂ ದಾರಿ ಮಾಡಿಕೊಟ್ಟಿವೆ’ ಎಂದರು.

‘ಸಾವಿರ ರೂಪಾಯಿಗಳಿಂದ ಶುರುವಾರ ತಮ್ಮ ಮೌಲ್ಯವರ್ಧನೆ ಪ್ರಯತ್ನಗಳು, ಈಗ ಗ್ರಾಹಕರ ಮನಗೆದ್ದಿವೆ. ಪ್ರತಿವರ್ಷ ₹25 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಲಾಗುತ್ತಿದೆ. ರೈತ ಕುಟುಂಬವೊಂದು ಮನಸ್ಸು ಮಾಡಿದರೆ ಏನೆಲ್ಲ ಸಾಧ್ಯವಿದೆ ಎಂಬುದಕ್ಕೆ ತಮ್ಮ ನಿದರ್ಶನವೇ ಸಾಕ್ಷಿ‘ ಎಂದು ನುಡಿದರು.

ADVERTISEMENT

ಸಿರಿಧಾನ್ಯ, ಬೇಳೆಕಾಳು, ತರಕಾರಿ, ಗೃಹ ಬಳಕೆ ಪದಾರ್ಥಗಳ ಮೌಲ್ಯವರ್ಧನೆ ಹೇಗೆ ಮಾಡಿಕೊಳ್ಳಬಹುದು ಎಂಬುದರ ಅನುಭವ ಹಂಚಿಕೊಂಡರು.

‘ಮಾತುಕತೆ’ಯ ಆತಿ‍ಥ್ಯ ವಹಿಸಿದ್ದ ಶ್ರೀನಾಥ ತೂನ ‘ಆರು ವರ್ಷಗಳಲ್ಲಿ ತಮ್ಮ ಜಮೀನು ಮಿನಿ ಮಲೆನಾಡು ಆಗಿದ್ದರ ಹಿಂದೆ ನೈಸರ್ಗಿಕ ಕೃಷಿ ಪಾತ್ರ ಹೆಚ್ಚಿದೆ’ ಎಂದರು. ಮುಸಲಾಪುರ ರಸ್ತೆಬದಿ ಮರಗಳನ್ನು ಜತನದಿಂದ ಸಂರಕ್ಷಿಸಿದ ಯಂಕಣ್ಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು, ವಿಜಯಪುರ, ರಾಯಚೂರು, ಧಾರವಾಡ, ಬಳ್ಳಾರಿ, ವಿಜಯನಗರ ಹಾಗೂ ಗದಗ ಜಿಲ್ಲೆಗಳ 150ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು. ಕೃಷಿ ವಿಜ್ಞಾನಿ ಡಾ. ಬದರಿಪ್ರಸಾದ್ ಪಿ.ಆರ್., ಸಾವಯವ ಕೃಷಿಕರಾದ ಶ್ರೀಪಾದರಾಜ ಮುರಡಿ, ಉದಯ ರಾಯರಡ್ಡಿ, ಕಿರಣ್ ಶೆಡ್ಡೆ, ಬಸವರಾಜ ಸಜ್ಜನ್, ಶಂಕರ ರಡ್ಡಿ, ಶಿವಪುತ್ರ ಚೌಧರಿ, ಅಣ್ಣಾಸಾಹೇಬ ಮೂಲಿಮನಿ, ಮಲ್ಲಪ್ಪ ಕುಂಬಾರ, ಆನಂದತೀರ್ಥ ಪ್ಯಾಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.