ಕುಷ್ಟಗಿ: ಇಲ್ಲಿಯ ಪ್ರಗತಿಪರ ರೈತ ಹಾಗೂ ಪರಿಸರವಾದಿ ದೇವೇಂದ್ರಪ್ಪ ಬಳೂಟಗಿ ಅವರಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ.
ಈ ವಿಷಯ ಕುರಿತಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಬಿ.ಎಸ್.ಪ್ರಶಾಂತ್ ಕುಮಾರ ಅವರು ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗೆ ಪತ್ರ ಬರೆದಿದ್ದಾರೆ. ಕೃಷಿ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಗುರುತಿಸಿ ತಜ್ಞರ ಪರಿಶೀಲನಾ ಸಮಿತಿ ನೀಡಿದ ವರದಿಯ ಅನ್ವಯ ದೇವೇಂದ್ರಪ್ಪ ಅವರ ಹೆಸರನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಮೇ 26ರಂದು ನಡೆಯುವ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಧನೆ ಏನು: ತಾಲ್ಲೂಕಿನ ಕೆ.ಗೋನಾಳ ಗ್ರಾಮದವರಾಗಿರುವ ಇಲ್ಲಿಯ ನಿವಾಸಿ ದೇವೇಂದ್ರಪ್ಪ ಬಳೂಟಗಿ ಕೃಷಿ ಕುಟುಂಬದಲ್ಲಿ ಬಡತನ ಉಂಡು ಬೆಳೆದು ಬಂದವರು. ನಂತರ ಸಿವಿಲ್ ಗುತ್ತಿಗೆದಾರ ಆದರು. ಕೂಡುಕುಂಟುಂಬದಲ್ಲಿ ಕೃಷಿಯಲ್ಲಿ ಆರ್ಥಿಕ ಸಂಕಷ್ಟ ಎದುರಿಸಿದ ಅನುಭವ ಇದ್ದರೂ ಅಂತಿಮವಾಗಿ ಆಸಕ್ತಿಯಿಂದ ಕೃಷಿ ಕ್ಷೇತ್ರದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಅದರಲ್ಲಿ ಸಾಧನೆಗೈದದ್ದು ಅಚ್ಚರಿಯ ಸಂಗತಿ. ಗುತ್ತಿಗೆದಾರ ವೃತ್ತಿಯಲ್ಲಿ ಕಾಣದ ತೃಪ್ತಿ ಕೃಷಿಯಲ್ಲಿ ಕಂಡುಕೊಂಡಿರುವುದಾಗಿ ಹೇಳುವ ಬಳೂಟಗಿ ಗುತ್ತಿಗೆದಾರ ವೃತ್ತಿಗೆ ವಿದಾಯ ಹೇಳಿ ಪೂರ್ಣಪ್ರಮಾಣದಲ್ಲಿ ತಮ್ಮ ಬದುಕನ್ನು ಕೃಷಿಗೆ ಅರ್ಪಿಸಿಕೊಂಡಿದ್ದಾರೆ.
ಸಾಕಷ್ಟು ಏಳು ಬೀಳುಗಳ ನಡುವೆಯೂ ಕೃಷಿಯಿಂದ ವಿಮುಖರಾಗದ ದೇವೇಂದ್ರಪ್ಪ ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸಿ ಅದರಲ್ಲೇ ತೃಪ್ತಿ ಕಂಡುಕೊಂಡಿದ್ದಾರೆ. ತೋಟಗಾರಿಕೆಯಲ್ಲಿ ತಾಲ್ಲೂಕಿನಲ್ಲಿ ದಾಳಿಂಬೆ ಬೆಳೆದು ಇತರರನ್ನೂ ಅದರತ್ತ ಪ್ರೇರೇಪಿಸಿದವರು. ರಾಷ್ಟ್ರೀಯ ದಾಳಿಂಬೆ ಬೆಳೆಗಾರರ ಸಂಘದ ಉಪಾಧ್ಯಕ್ಷರಾಗಿಯೂ ದೇವೇಂದ್ರಪ್ಪ ಸೇವೆ ಸಲ್ಲಿಸಿದ್ದು ಒಂದು ಕಾಲದಲ್ಲಿ ಕುಷ್ಟಗಿ ದಾಳಿಂಬೆ ಉಚ್ಛ್ರಾಯ ಸ್ಥಿತಿ ತಲುಪಿ ಐರೋಪ್ಯ ರಾಷ್ಟ್ರಗಳ ಮಾರುಕಟ್ಟೆಯಲ್ಲೂ ಪರಿಮಳ ಹರಡುವಲ್ಲಿ ಇತರರ ಜೊತೆಗೆ ದೇವೇಂದ್ರಪ್ಪ ಅವರ ಪ್ರಯತ್ನವೂ ಸಾಕಷ್ಟಿದೆ ಎಂಬುದನ್ನು ಅವರ ಸಮೀಪವರ್ತಿಗಳು ನೆನಪಿಸಿಕೊಳ್ಳುತ್ತಾರೆ.
ಕೇವಲ ಕೃಷಿಕರಷ್ಟೇ ಪರಿಸರ ಸಂರಕ್ಷಣೆ ವಿಷಯದಲ್ಲೂ ದೇವೇಂದ್ರಪ್ಪ ಹಲವು ಪ್ರಯೋಗಗಳನ್ನೂ ಕೈಗೊಳ್ಳುವ ಮೂಲಕ ಮಾದರಿಯಾಗಿದ್ದು ಅರಣ್ಯ ಕೃಷಿ, ಭೂ ಸವಕಳಿ ತಡೆಗಟ್ಟುವ ನಿಟ್ಟಿನಲ್ಲಿ ಮರಗಿಡಗಳ ಪಾತ್ರ, ಜಲಸಂರಕ್ಷಣೆಯಿಂದ ಅಂತರ್ಜಲ ಹೆಚ್ಚಳಕ್ಕೆ ಪ್ರಯತ್ನ, ಮಳೆನೀರಿನ ಕೊಯ್ಲು ಹೀಗೆ ಅನೇಕ ರೀತಿಯ ಪ್ರಕೃತಿಪ್ರಿಯ ಕೆಲಸಗಳು ಜನರ ಗಮನಸೆಳೆಯುವಲ್ಲಿ ಯಶಸ್ವಿಯಾಗಿವೆ.
ಕಾಯಕ ತತ್ವ: ರಾಜಕೀಯದಲ್ಲೂ ಗುರುತಿಸಿಕೊಂಡಿರುವ ದೇವೇಂದ್ರಪ್ಪ ಆ ಕ್ಷೇತ್ರ ಅಷ್ಟಕ್ಕಷ್ಟೇ. ಕೇವಲ ಬಿಳಿ ಬಟ್ಟೆ ತೊಟ್ಟು ಗುರುತಿಸಿಕೊಳ್ಳುವ ಜಾಯಮಾನದವರಲ್ಲ. ಬದಲಾಗಿ ಸ್ವತಃ ಶ್ರಮಜೀವಿಯಾಗಿರುವ ಅವರ ದಿನಚರಿ ಆರಂಭಗೊಳ್ಳುವುದು ಮಣ್ಣಿನ ಮಾತುಕತೆಯೊಂದಿಗೆ. ಇತರೆ ರೈತರು, ಯುವಕರು ನಾಚುವ ರೀತಿಯಲ್ಲಿ 71ರ ಹರೆಯದಲ್ಲೂ ಕಾಯಕತತ್ವದಲ್ಲಿ ನಂಬಿಕೆ ಇರಿಸಿ ದುಡಿಮೆ ಪ್ರವೃತ್ತಿಯಿಂದ ಹಿಂದೆ ಸರಿಯದ ದೇವೇಂದ್ರಪ್ಪ ಭೂಮಿಯೊಂದಿಗೆ ಅವಿನಾಭಾವ ಸಂಬಂಧ ಇರಿಸಿಕೊಂಡಿದ್ದು ಇವರ ಕೃಷಿಕಾಯಕ ಅನೇಕ ರೈತರಿಗೆ ಪ್ರೇರಣೆ ನೀಡಿದೆ. ಈಗ ಕೃಷಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಅವರ ಕಾಯಕ ಪ್ರವೃತ್ತಿಗೆ ಸಂದ ಗೌರವ ಎಂದು ಹೇಳಲಾಗುತ್ತಿದೆ.
‘ಭೂಮಿಯಲ್ಲಿರುವ ಶಕ್ತಿಯನ್ನು ನಾವು ಇನ್ನೂ ಅರಿತಿಲ್ಲ. ಎರಡು ಎಕರೆ ಜಮೀನು ಇದ್ದರೂ ದೊಡ್ಡ ಸಾಧನೆ ಮಾಡಲು ಸಾಧ್ಯವಿದ್ದು ವಿದ್ಯಾವಂತರು ಕೃಷಿ ಕ್ಷೇತ್ರಕ್ಕೆ ಬರಬೇಕಿದೆ. ಶೂನ್ಯ ಕೃಷಿಯಲ್ಲೂ ರೈತ ಆರ್ಥಿಕ ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ’ ಎನ್ನುತ್ತಾರೆ ದೇವೇಂದ್ರಪ್ಪ.
ಈ ಗೌರವ ವೈಯಕ್ತಿಕವಾಗಿ ನನಗೆ ಸಲ್ಲಿಸಿದ್ದಲ್ಲ ಬದಲಾಗಿ ಇಡೀ ರೈತ ಕುಲಕ್ಕೆ ಸಂದ ಗೌರವ ಆಗಿದ್ದು ನನ್ನ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿದೆದೇವೇಂದ್ರಪ್ಪ ಬಳೂಟಗಿ ಪ್ರಗತಿಪರ ರೈತ
ಕೃಷಿ ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿನ ಪ್ರಗತಿಯಲ್ಲಿ ದೇವೇಂದ್ರಪ್ಪ ಹೆಜ್ಜೆ ಗುರುತುಗಳಿವೆ. ಕೃಷಿ ಕಾಯಕದಲ್ಲಿ ತೊಡಗಿರುವ ಅವರು ಕೇವಲ ವ್ಯಕ್ತಿಯಲ್ಲ ಕೃಷಿ ಕ್ಷೇತ್ರದ ಶಕ್ತಿ.ನಾಗಪ್ಪ ಸೂಡಿ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.