ADVERTISEMENT

ಯಲಬುರ್ಗಾ| ಕೊಳಗೇರಿಯಂತಾದ ಹುಲೆಗುಡ್ಡ; ಸ್ವಚ್ಛತೆ ಮರೀಚಿಕೆ

ಉಮಾಶಂಕರ ಬ.ಹಿರೇಮಠ
Published 23 ನವೆಂಬರ್ 2025, 7:12 IST
Last Updated 23 ನವೆಂಬರ್ 2025, 7:12 IST
ಯಲಬುರ್ಗಾ ತಾಲ್ಲೂಕು ಹುಲೆಗುಡ್ಡ ಗ್ರಾಮದ ರಸ್ತೆಯಲ್ಲಿ ಕೊಳಚೆ ನೀರು ಸಂಗ್ರಹಗೊಂಡಿರುವುದು
ಯಲಬುರ್ಗಾ ತಾಲ್ಲೂಕು ಹುಲೆಗುಡ್ಡ ಗ್ರಾಮದ ರಸ್ತೆಯಲ್ಲಿ ಕೊಳಚೆ ನೀರು ಸಂಗ್ರಹಗೊಂಡಿರುವುದು   

ಯಲಬುರ್ಗಾ: ತಾಲ್ಲೂಕಿನ ಹುಲೆಗುಡ್ಡ ಗ್ರಾಮದ ಬಹುತೇಕ ಕಡೆಗಳಲ್ಲಿ ರಸ್ತೆಯ ಮೇಲೆಯೇ ಕೊಳಚೆ ನೀರು ಸಂಗ್ರಹಗೊಂಡು ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಜೊತೆಗೆ ಸೊಳ್ಳೆಗಳ ಕಾಟ ಮತ್ತು ದುರ್ನಾತ ತಾಣವಾಗಿ ರೂಪುಗೊಂಡಿದೆ.

ಗೆದಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹುಲೆಗುಡ್ಡ ಗ್ರಾಮದಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಎಲ್ಲೆಂದರಲ್ಲಿ ಕೊಳಚೆ ನೀರು ಸಂಗ್ರಹಗೊಂಡಿದ್ದು, ಸಾಂಕ್ರಾಮಿಕ ರೋಗದ ಭೀತಿ ಗ್ರಾಮಸ್ಥರು ಎದುರಿಸುವಂತಾಗಿದೆ.

ಸುಮಾರು ಒಂದೂವರೆ ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮ ಅಧಿಕಾರಿಗಳು ಅಭಿವೃದ್ಧಿ ಕಾಳಜಿ ತೋರುತ್ತಿಲ್ಲ. ವಿವಿಧ ಯೋಜನೆ ಅಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನುದಾನ ನಿಗದಿಪಡಿಸಿದ್ದರೂ ಅನುಷ್ಠಾನಗೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ADVERTISEMENT

ಗ್ರಾಮದ ವಿವಿಧ ಓಣಿಯಲ್ಲಿ ಸಿಮೆಂಟ್ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ದಿನಬಳಕೆಯ ನೀರು ಸುಗಮವಾಗಿ ಹರಿದು ಹೋಗದೆ ರಸ್ತೆಯ ಮೇಲೆ ಹರಿಯುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಅಧಿಕಾರಿಗಳು ಈ ಕುರಿತು ಮುತುವರ್ಜಿ ತೋರುತ್ತಿಲ್ಲ. ಸಂಬಂಧಿಸಿದವರ ನಿರ್ಲಕ್ಷ ಧೋರಣೆಯಿಂದಾಗಿ ಗ್ರಾಮದಲ್ಲಿ ಸ್ವಚ್ಛತೆಯೇ ಮರಿಚಿಕೆಯಾಗಿದೆ. ಊರಲ್ಲಿ ಮೂಗುಮುಚ್ಚಿಕೊಂಡು ತಿರುಗಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಕೂಡಲೇ ಸ್ವಚ್ಛತೆ ಕಾರ್ಯಕೈಗೊಳ್ಳಬೇಕು ಎಂದು ಗ್ರಾಮದ ಯುವ ಮುಖಂಡ ಹನುಮಂತಪ್ಪ, ಕೃಷ್ಣಪ್ಪ ಒತ್ತಾಯಿಸಿದ್ದಾರೆ.

ಶೀಘ್ರ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುವುದು. ಚರಂಡಿ ಇಲ್ಲದ ಕಾರಣ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು.
ದೊಡ್ಡಪ್ಪ ಪಿಡಿಒ ಗ್ರಾಪಂ ಗೆದಗೇರಿ
ಕೊಳಚೆ ನೀರಿನ ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿ ತಾಣವಾಗಿವೆ. ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗ್ರಾಮಸ್ಥರಲ್ಲಿ ಅನಾರೋಗ್ಯದ ಭೀತಿ ಕಾಡುತ್ತಿದೆ. ಸಂಬಂಧಪಟ್ಟವರು ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು
–ಶರಣಗೌಡ ಮಾಲಿಪಾಟೀಲ ಹುಲೆಗುಡ್ಡ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.