ADVERTISEMENT

ಎರಡು ದಿನಗಳಲ್ಲಿ ಗ್ರಾಮದಲ್ಲಿ ಶಾಂತಿ ಸಭೆ: ತಂಗಡಗಿ ಭರವಸೆ

ಹುಲಿಹೈದರದಲ್ಲಿ ಪೊಲೀಸ್‌ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 9:01 IST
Last Updated 19 ಆಗಸ್ಟ್ 2022, 9:01 IST
ಪೊಲೀಸರ ಪಥ ಸಂಚಲನ
ಪೊಲೀಸರ ಪಥ ಸಂಚಲನ   

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರದಲ್ಲಿ ಇತ್ತೀಚೆಗೆ ನಡೆದ ಗುಂಪು ಘರ್ಷಣೆಯಿಂದಾಗಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಅವರಲ್ಲಿನ ಭಯ ಹೋಗಲಾಡಿಸಲು ಪೊಲೀಸರು ಶುಕ್ರವಾರ ಗ್ರಾಮದಲ್ಲಿ ಪಥ ಸಂಚಲನ ನಡೆಸಿದರು.

ಊರು ಬಿಟ್ಟು ಹೋಗಿರುವ ಜನ ವಾಪಸ್‌ ಬರಬೇಕು, ಮೊದಲಿನ ಹಾಗೆ ಎಲ್ಲರೂ ನಿರುಮ್ಮಳವಾಗಿ ಓಡಾಡಬೇಕು, ನಿಮ್ಮ ಭದ್ರತೆಗೆ ನಾವಿದ್ದೇವೆ ಎಂದು ಪೊಲೀಸರು ಜನರಲ್ಲಿ ಭರವಸೆ ತುಂಬಿದರು.

‘ಇದುವರೆಗೆ ಒಟ್ಟು 121 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, 30 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈ ಘಟನೆ ಕುರಿತು ನಿಷ್ಪಕ್ಷವಾಗಿ ತನಿಖೆ ನಡೆಸಲಾಗುತ್ತಿದೆ. ಸುಮಾರು 100 ಜನರನ್ನು ಬಂಧಿಸಲು ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದ್ದಾರೆ.

ADVERTISEMENT

ಆಗಸ್ಟ್‌ 11ರಂದು ನಡೆದಿದ್ದ ಘರ್ಷಣೆಯಲ್ಲಿ ಹುಲಿಹೈದರ ಗ್ರಾಮದ ಯಂಕಪ್ಪ ತಳವಾರ (44) ಹಾಗೂ ಪಾಷವಲಿ ಮಾಳಿಗದ್ದಿ (27) ಮೃತಪಟ್ಟಿದ್ದರು. ಧರ್ಮಣ್ಣ ನಾಗೇಂದ್ರಪ್ಪ ಎಂಬುವರಿಗೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿ ಇದೇ 20ರ ತನಕ ನಿಷೇಧಾಜ್ಞೆ ಜಾರಿಯಲ್ಲಿದೆ.

ನಾನೇ ಶಾಂತಿ ಸಭೆ ಮಾಡುವೆ: ಘಟನೆ ಕುರಿತು ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ‘ಹೆಣದ ಮೇಲೆ ರಾಜಕಾರಣ ಮಾಡುವುದಿಲ್ಲ. ಗ್ರಾಮದಲ್ಲಿ ಶಾಂತಿ ಸ್ಥಾಪನೆಯಾಗಬೇಕು, ಜನ ನೆಮ್ಮದಿಯಾಗಿ ಬದುಕಬೇಕು ಎನ್ನುವ ಆಸೆ ನನಗೂ ಇದೆ. ಸದ್ಯಕ್ಕೆ ಅಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಶಾಂತಿಸಭೆ ಮಾಡಿಲ್ಲ. ಎರಡು ದಿನಗಳಲ್ಲಿ ನಾನೇ ಸಭೆ ನಡೆಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.