ADVERTISEMENT

ಹೈದರಾಬಾದ್ ನಿಜಾಮರ ಕಾಲದ ಪಾರಂಪರಿಕ ಕಟ್ಟಡದ ನೆಲಸಮಕ್ಕೆ ತಯಾರಿ

ಅಚ್ಚರಿಗೆ ಕಾರಣವಾದ ಸುಸ್ಥಿತಿಯಲ್ಲಿರುವ ಕಟ್ಟಡದ ತೆರವು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 6:48 IST
Last Updated 4 ಜನವರಿ 2022, 6:48 IST
ನಿಜಾಮರ ಆಡಳಿತದಲ್ಲಿ ನಿರ್ಮಿಸಲಾಗಿರುವ ಕುಷ್ಟಗಿಯಲ್ಲಿನ ಕಟ್ಟಡ
ನಿಜಾಮರ ಆಡಳಿತದಲ್ಲಿ ನಿರ್ಮಿಸಲಾಗಿರುವ ಕುಷ್ಟಗಿಯಲ್ಲಿನ ಕಟ್ಟಡ   

ಕುಷ್ಟಗಿ: ಸ್ವಾತಂತ್ರ್ಯ ಪೂರ್ವ ಹೈದರಾಬಾದ್ ನಿಜಾಮರ ಆಡಳಿತದಲ್ಲಿ ನಿರ್ಮಾಣಗೊಂಡಿದ್ದ, ಪೊಲೀಸ್‌ ಇಲಾಖೆಗೆ ಸೇರಿದ ಪಾರಂಪರಿಕ ಕಟ್ಟಡ ಇಷ್ಟರಲ್ಲೇ ನೆಲಸಮಗೊಳ್ಳಲಿದೆ.

1939ರಲ್ಲಿ ಈ ಕಟ್ಟಡವನ್ನು ಗಾರೆಯಿಂದ ನಿರ್ಮಿಸಲಾಗಿದೆ. ಚಾವಣಿ, ದೊಡ್ಡ ಗಾತ್ರದ ಗೋಡೆ ಇನ್ನೂ ಗಟ್ಟಿಮುಟ್ಟಾಗಿದ್ದು ಈಗಲೂ ಸುಸ್ಥಿತಿಯಲ್ಲಿ ಇದೆ. ಈ ಕಟ್ಟಡದ ಸ್ಥಳದಲ್ಲಿ ಹೊಸದಾಗಿ ಪೊಲೀಸ್‌ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ.

ಈಗಿರುವ ಕಟ್ಟಡವನ್ನು ತೆರವುಗೊಳಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ADVERTISEMENT

ಅಷ್ಟೇ ಅಲ್ಲದೆ ನಿಜಾಮರ ಅವಧಿಯಲ್ಲಿಯೇ ನಿರ್ಮಿಸಲಾಗಿದ್ದ ಪೊಲೀಸ್‌ ಠಾಣೆಯ ಕಟ್ಟಡವನ್ನು ಈಗಾಗಲೇ ತೆರವುಗೊಳಿಸಿ ನೆಲವನ್ನು ಸಮತಟ್ಟುಗೊಳಿಸಲಾಗಿದೆ. ಪಟ್ಟಣದಲ್ಲಿ ತಹಶೀಲ್ದಾರ್‌ ಕಚೇರಿ, ಸಿವಿಲ್‌ ನ್ಯಾಯಾಲಯ, ಪ್ರವಾಸಿ ಮಂದಿರದ ಹಳೆ ಕಟ್ಟಡಗಳೂ ನಿಜಾಮರ ಆಡಳಿತದಲ್ಲಿ ನಿರ್ಮಿಸಲಾಗಿದ್ದು, ಪೊಲೀಸ್‌ ಇಲಾಖೆ ಕಚೇರಿ ಕಟ್ಟಡಗಳೂ ಈ ಗುಂಪಿಗೆ ಸೇರಿವೆ.

ಇಲ್ಲಿ ಪೊಲೀಸ್‌ ಇಲಾಖೆಯ ಗೃಹ ನಿರ್ಮಾಣ ಮಂಡಳಿಯ ಎರಡು ಅಂತಸ್ತಿನ ಕಟ್ಟಡವು₹1.99 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದೆ. ಕೆಳಗೆ ಪೊಲೀಸ್‌ ಠಾಣೆ, ಮಧ್ಯದಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿ ಮತ್ತು ಮೇಲ್ಭಾಗದಲ್ಲಿ ಸಭಾಂಗಣ ನಿರ್ಮಾಣಗೊಳ್ಳಲಿದೆ. ಹೊಸ ಕಟ್ಟಡ ನಿರ್ಮಾಣಗೊಳ್ಳುವವರೆಗೂ ಸಿಪಿಐ ಕಚೇರಿಯನ್ನು ಪೊಲೀಸ್‌ ಕಚೇರಿ ಆವರಣದ ಸಣ್ಣ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗುತ್ತಿದೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್ ಎನ್‌.ಆರ್‌.ನಿಂಗಪ್ಪ ತಿಳಿಸಿದರು.

ಕಟ್ಟಡದ ನಿರ್ಮಾಣದ ಹೊಣೆಯನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಎಲ್‌) ವಹಿಸಲಾಗಿದೆ. ಆದರೆ ಈ ಸಂಸ್ಥೆ ಕಟ್ಟಡ ನಿರ್ಮಾಣದ ಕೆಲಸವನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಲು ಉದ್ದೇಶಿಸಿದೆ.

ಕಾಮಗಾರಿ ಗುತ್ತಿಗೆ ಪಡೆಯಲು ಪೈಪೋಟಿ ನಡೆಯುತ್ತಿದೆ.

ಅದೇ ರೀತಿ ತಾಲ್ಲೂಕಿನ ಹನುಮಸಾಗರದಲ್ಲಿಯೂ ₹1.55 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.