ಕೊಪ್ಪಳ: ‘ಭವ್ಯ ಭಾರತದ ಇತಿಹಾಸ ಗಮನಿಸಿದಾಗ ಎಲ್ಲಾ ಧರ್ಮ ಹಾಗೂ ಜಾತಿಗಳ ಜನ ನಮ್ಮ ದೇಶದಲ್ಲಿ ಅನ್ಯೋನ್ಯವಾಗಿ ಬದುಕಿದ್ದಾರೆ. ನಮ್ಮ ದೇಶದ ಸಹಬಾಳ್ವೆ ಜಗತ್ತಿಗೆ ಮಾದರಿಯಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಮಹಮ್ಮದ್ ಪೈಗಂಬರ ಅವರ 1500ನೇ ಜನ್ಮದಿನದ ಅಂಗವಾಗಿ ನಡೆದ ವಿಶ್ವಶಾಂತಿ ಸಂದೇಶ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಕಾಲಘಟ್ಟದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ದೇಶಕ್ಕಾಗಿ ಹೋರಾಟ ಮಾಡಿದ ಯಾರೂ ಹಿಂದೂ-ಮುಸ್ಲಿಂ ಎಂದಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ದೇಶವ್ಯಾಪಿಸಿದೆ. ದೇಶದ ಸಂವಿಧಾನ ಉಳಿಸಲು ಹೋರಾಡಬೇಕಿದೆ’ ಎಂದು ಹೇಳಿದರು.
‘ಪೈಗಂಬರರು ಜಗತ್ತಿಗೆ ಶಾಂತಿ, ಸಹಬಾಳ್ವೆಯ ಸಂದೇಶ ಸಾರಿದರು. ಭಾರತ ಬಿಟ್ಟು ಏಳು ದೊಡ್ಡ ಧರ್ಮಗಳು ಇರುವ ಮತ್ತೊಂದು ರಾಷ್ಟ್ರವಿಲ್ಲ. ಯುದ್ಧದ ಸಂದರ್ಭದಲ್ಲಿಯೂ ಪೈಗಂಬರರು ಶಾಂತಿಯ ಮಂತ್ರ ಪಠಿಸಿದರು’ ಎಂದು ಸ್ಮರಿಸಿದರು.
ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್ ಮಾತನಾಡಿ ‘ನಾವು ಯಾವುದೇ ಧರ್ಮದವರಿದ್ದರೂ ನಾವೆಲ್ಲರೂ ಮನುಷ್ಯರು. ಪ್ರವಾದಿ ಮಹಮ್ಮದ್ ಅವರ ಸಂದೇಶ ವಿಶ್ವಶಾಂತಿಯಾಗಿದೆ. ಕೆಲವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈ ಕಾರ್ಯಕ್ರಮದ ಮೂಲಕ ಉತ್ತರ ಕೊಡುತ್ತಿದ್ದೇವೆ’ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ‘ಇದು ವಿಶ್ವ ಶಾಂತಿ ಸಭೆ ಎನ್ನುವಂತೆ ಭಾಸವಾಗುತ್ತಿದೆ. ಮಹಮ್ಮದ್ ಪೈಗಂಬರ್ ಅವರ ದೂರದೃಷ್ಟಿ ಹೇಗೆ ಇತ್ತು ಎನ್ನುವುದು ನಾವು ತಿಳಿದುಕೊಳ್ಳಬೇಕು’ ಎಂದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ‘ಪೈಗಂಬರರು ಸಮಸ್ತ ಮನುಕುಲಕ್ಕೆ ಶಾಂತಿಯ ಸಂದೇಶ ನೀಡಿದ್ದು, ಇದು ವಿಶ್ವಶಾಂತಿಯ ಸಮಾವೇಶದಂತೆ ಇದೆ. ಸಮಾಜದ ಪ್ರಸ್ತುತ ಸಮಸ್ಯೆಗಳಿಗೆ ಅವರ ಆದರ್ಶಗಳು ಮಾದರಿಯಾಗಿವೆ’ ಎಂದು ಸ್ಮರಿಸಿಕೊಂಡರು.
ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ‘ವಿಶ್ವಶಾಂತಿಯ ಸಂದೇಶ ನೀಡಲು ನಾವೆಲ್ಲರೂ ಒಂದೆಡೆ ಸೇರಿದ್ದೇವೆ. ಜಗತ್ತಿನ ಬಹಳಷ್ಟು ಕಡೆ ಯುದ್ಧದ ಭಯದ ಭಯಾನಕ ವಾತಾವರಣ ಇದೆ. ಒಂದೆಡೆ ಬಾಂಬ್ ಹಾಕುತ್ತಿದ್ದರೆ ಇನ್ನೊಂದೆಡೆ ಆರ್ಥಿಕ ಶೋಷಣೆ ಮಾಡಲಾಗುತ್ತಿದೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಪೌರಾಡಳಿತ ಖಾತೆ ಸಚಿವ ರಹೀಂಖಾನ್, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ವಕ್ಫ್ ಬೋರ್ಡ್ ಜಿಲ್ಲಾ ಅಧ್ಯಕ್ಷ ಪೀರಾಹುಸೇನ್ ಹೊಸಳ್ಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಮುಖಂಡ ಆಸೀಫ್ ಅಲಿ, ಶಿರಹಟ್ಟಿಯ ಫಕೀರ ಸಿದ್ದರಾಮೇಶ್ವರ ಸ್ವಾಮೀಜಿ, ಕೆಎಂಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಎಂ. ಸೈಯದ್, ದೊಡ್ಡಹುಣೇಸಮಠದ ಚನ್ನಬಸವ ಸ್ವಾಮೀಜಿ,ಮಹಾರಾಷ್ಟ್ರದ ಸಜ್ಜಾದೆ ನಶೀನ್ ನೀಲಂಗ, ಕಾಂಗ್ರೆಸ್ ಮುಖಂಡ ಅಮರೇಶ ಕರಡಿ, ಕಾಟನ್ ಪಾಷಾ, ಶಾಮಿದ್ ಮನಿಯಾರ್, ಕೊಪ್ಪಳ ಯುಸೂಫಿಯಾ ಮಸೀದಿಯಾ ಮುಫ್ತಿ ನಜೀರ್ ತಸ್ಕೀನ್, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಹಾರಾಷ್ಟ್ರದ ಮಾಜಿ ಸಂಸದ ಉಬೇದುಲ್ಲಾ ಹಾಶ್ಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು
ಮಹಮ್ಮದ್ ಪೈಗಂಬರ್ ಅವರ ಸಿದ್ಧಾಂತ ಪಾಲಿಸಿದರೆ ಮಾತ್ರ ಅವರಿಗೆ ನಿಜವಾಗಿಯೂ ಗೌರವ ಸಲ್ಲಿಸಿದಂತೆ ಆಗುತ್ತದೆ. ಎಲ್ಲರೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು.– ಅಮರೇಗೌಡ ಬಯ್ಯಾಪುರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಎಲ್ಲ ಧರ್ಮಗಳು ಒಂದೇ ಸಾರ ಹೇಳುತ್ತವೆ. ಪ್ರೀತಿ ಹಂಚಬೇಕು ಎನ್ನುವ ಸಂದೇಶ ನೀಡಿವೆ. ನಮ್ಮಲ್ಲಿನ ಪ್ರೀತಿಯನ್ನು ಎಲ್ಲರಿಗೂ ಹಂಚುವ ಕೆಲಸ ಮಾಡಬೇಕು.– ಜಿ.ಎಸ್. ಪಾಟೀಲ, ಶಾಸಕ
ಕೊಪ್ಪಳ ಜಿಲ್ಲೆ ಭಾವೈಕ್ಯದ ತಾಣ. ಕೋವಿಡ್ ಸಂದರ್ಭದಲ್ಲಿ ಹಿಂದೂ ಸಮಾಜದವರು ಮೃತಪಟ್ಟಾಗ ಮುಸ್ಲಿಮರು ಹಿಂದೂಗಳ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಮಾಡಿ ಭಾವೈಕ್ಯ ಮೆರೆದಿದ್ದಾರೆ.– ಎಚ್.ಆರ್. ಶ್ರೀನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.