
ಉಪಲೋಕಾಯುಕ್ತರು
ಕೊಪ್ಪಳ: ನಗರದ ಹೊರವಲಯದ ಚಿಕ್ಕಸಿಂಧೋಗಿ ರಸ್ತೆಯಲ್ಲಿ 2000 ಆಶ್ರಯ ಮನೆಗಳ ನಿರ್ಮಾಣ ಅಪೂರ್ಣ, ಎಲ್ಲೆಡೆಯೂ ಜಾಲಿಮುಳ್ಳುಗಳು ಬೆಳೆದಿರುವುದು, ಗಂಜ್ ವೃತ್ತದ ಸಮೀಪದಲ್ಲಿರುವ ಎಪಿಎಂಸಿಯಲ್ಲಿ ಮೂಲಸೌಕರ್ಯಗಳ ಕೊರತೆಗಳನ್ನು ಕಂಡ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ತಮ್ಮ ಅಧೀನ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಬೆಳಿಗ್ಗೆ ಮೊದಲು ಆಶ್ರಯ ಮನೆಗಳ ನಿರ್ಮಾಣಕ್ಕೆ ಮೀಸಲಾದ ಜಾಗಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಪರಿಶೀಲಿಸಿದರು. ಫಲಾನುಭವಿಗಳು ತಮ್ಮ ಪಾಲಿನ ವಂತಿಕೆ ₹30 ಸಾವಿರ ಪಾವತಿಸಿದರೂ ಅವರಿಗೆ ಮನೆಗಳನ್ನು ಹಸ್ತಾಂತರಿಸಿಲ್ಲ. ತ್ಯಾಜ್ಯದ ರಾಶಿಯೇ ಇದೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳೇ ಇಷ್ಟೊಂದು ನಿರ್ಲಕ್ಷ್ಯ ಮಾಡಿದರೆ ಬಡವರು ಏನು ಮಾಡಬೇಕು? ಎಂದು ತರಾಟೆಗೆ ತೆಗೆದುಕೊಂಡರು. ಆಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ’ಮನೆಗಳ ನಿರ್ಮಾಣ ಹಾಗೂ ನಿರ್ವಹಣೆ ಹೊಣೆ ಹೊತ್ತಿರುವ ನಗರಸಭೆ ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳ ಜೊತೆ ಶೀಘ್ರವೇ ಸಭೆ ಮಾಡಲಾಗುವುದು’ ಎಂದು ತಿಳಿಸಿದರು. ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರು ಅವರಿಗೆ ’ನೀವೇ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಬಡವರಿಗೆ ಮನೆ ಒದಗಿಸಬೇಕು’ ಎಂದು ಉಪಲೋಕಾಯುಕ್ತರು ಸೂಚಿಸಿದರು.
ಬಳಿಕ ನಗರಸಭೆಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ವಿಲೇವಾರಿ ವಿಧಾನ, ಕಸ ಸಂಗ್ರಹಣೆ ವೈಖರಿ ಪರಿಶೀಲಿಸಿದರು. ತ್ಯಾಜ್ಯವನ್ನು ಗೊಬ್ಬರವಾಗಿ ಮಾರ್ಪಾಡಿಸುತ್ತಿರುವ ವಿಧಾನದ ಬಗ್ಗೆ ಮಾಹಿತಿ ಪಡೆದುಕೊಂಡು ತರಕಾರಿಗಳ ತ್ಯಾಜ್ಯದ ಜೊತೆ ಪ್ಲಾಸ್ಟಿಕ್ ಸೇರದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು. ಉತ್ಪಾದಿತ ಗೊಬ್ಬರದಲ್ಲಿ ವಿಷಕಾರಿ ಅಂಶದ ಬಗ್ಗೆಯೂ ಪರೀಕ್ಷೆ ನಡೆಸಬೇಕು ಎಂದರು.
ಎಪಿಎಂಸಿಗೆ ಬಂದಾಗ ಸಮಸ್ಯೆಗಳ ಮಹಾಪೂರವೇ ಎದುರಾಯಿತು. ನಿತ್ಯ ಸಾಕಷ್ಟು ರೈತರು ವಿವಿಧ ಹಳ್ಳಿಗಳಿಂದ ಬರುತ್ತಿದ್ದು ಅವರಿಗೆ ಎಪಿಎಂಸಿ ಹೊರಗಡೆ ಶೌಚಾಲಯ ನಿರ್ಮಾಣ ಮಾಡಿದ್ದಕ್ಕೆ ಉಪಲೋಕಾಯುಕ್ತರು ಗರಂ ಆದರು. ವಾರ್ಷಿಕ ₹3.5 ಕೋಟಿ ಸೆಸ್ ಬರುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದಾಗ ‘ಇಷ್ಟೊಂದು ಹಣ ಬಂದರೂ ಮೂಲ ಸೌಲಭ್ಯಗಳನ್ನು ಯಾಕೆ ಕಲ್ಪಿಸುತ್ತಿಲ್ಲ. ದೂರದ ಊರುಗಳಿಂದ ಬಂದವರಿಗೆ ಉಳಿದುಕೊಳ್ಳಲು ರೈತ ಭವನ ಯಾಕೆ ನಿರ್ಮಿಸಿಲ್ಲ. ಶೌಚಾಲಯ ನಿರ್ವಹಣೆ ಮಾಡುತ್ತಿರುವ ಎಜೆನ್ಸಿಯವರು ನಿಗದಿಗಿಂತಲೂ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದ್ದರೂ ಯಾಕೆ ಕ್ರಮ ವಹಿಸುತ್ತಿಲ್ಲ’ ಎಂದು ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಎಪಿಎಂಸಿ ಆವರಣದಲ್ಲಿ ಸರ್ಕಾರಿ ಜಾಗ ನೀಡಿ ಖಾಸಗಿಯವರಿಗೆ ಕಟ್ಟಡ ಕಟ್ಟಿಕೊಳ್ಳಲು ಅವಕಾಶ ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪಲೋಕಾಯುಕ್ತರು ’ಎಪಿಎಂಸಿಯನ್ನು ಖಾಸಗಿಯವರಿಗೆ ಮಾರಿಬಿಡಿ’ ಎಂದು ಆಕ್ರೋಶ ಹೊರಹಾಕಿದರು. ಎಪಿಎಂಸಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರೈತ ಭವನ ನಿರ್ಮಿಸಿ ಕನಿಷ್ಠ 10 ಹಾಸಿಗೆಯ ಸೌಲಭ್ಯ ರೈತರಿಗೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ರಾಯಚೂರು ಲೋಕಾಯುಕ್ತ ಎಸ್.ಪಿ. ಸತೀಶ್ ಎಸ್. ಚಿಟಗುಬ್ಬಿ, ಲೋಕಾಯುಕ್ತದ ವಿಚಾರಣೆ ಹೆಚ್ಚುವರಿ ನಿಬಂಧಕ ಕಸನಪ್ಪ ನಾಯ್ಕ, ರಮಾಕಾಂತ್ ಚವ್ಹಾಣ, ಅರವಿಂದ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ಎಸ್. ದರಗದ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.