ADVERTISEMENT

ಕೊಪ್ಪಳ | ಮುಖ್ಯಮಂತ್ರಿ ಬಳಿ ಮತ್ತೊಮ್ಮೆ ನಿಯೋಗ: ತಂಗಡಗಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 6:18 IST
Last Updated 16 ಸೆಪ್ಟೆಂಬರ್ 2025, 6:18 IST
<div class="paragraphs"><p>ಶಿವರಾಜ ತಂಗಡಗಿ</p></div>

ಶಿವರಾಜ ತಂಗಡಗಿ

   

ಕೊಪ್ಪಳ: ‘ಜಿಲ್ಲಾಕೇಂದ್ರದ ಬಳಿ ಈಗಾಗಲೇ ಸಾಕಷ್ಟು ಕಾರ್ಖಾನೆಗಳು ಇದ್ದು, ಇವುಗಳ ಪರಿಣಾಮ ಜನರ ಆರೋಗ್ಯ ಮೇಲಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ಮತ್ತೊಮ್ಮೆ ತರಲಾಗುವುದು. ಅವರ ಬಳಿ ಇನ್ನೊಮ್ಮೆ ನಿಯೋಗ ತೆಗೆದುಕೊಂಡು ಹೋಗಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಬೃಹತ್‌ ಕೈಗಾರಿಕಾ ಸಚಿವರು ಹಿಂದಿನವರು ನೀಡಿದ ಪರವಾನಿಗೆಯನ್ನು ರದ್ದು ಪಡಿಸಬೇಕು. ಕೊಪ್ಪಳದಲ್ಲಿ ಈಗಿರುವ ಕಾರ್ಖಾನೆಗಳೇ ಸಾಕು’ ಎಂದರು.

ADVERTISEMENT

‘ಜಿಲ್ಲೆಗೆ ಮತ್ತೆ ಹೊಸ ಕಾರ್ಖಾನೆಗಳು ಬೇಡವೆಂದು ಈಗಾಗಲೇ ಮನವಿ ಮಾಡಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ಮಾಡಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಆ ಸಭೆಯಲ್ಲಿ ಮತ್ತೊಮ್ಮೆ ಮನವರಿಕೆ ಮಾಡುತ್ತೇವೆ. ಕೆಲ ಕಾರ್ಖಾನೆವರು ಪರವಾನಗಿ ಪಡೆದಿದ್ದಾರೆ. ಈ ಬಗ್ಗೆಯೂ ಚರ್ಚಿಸಲಾಗುವುದು‌’ ಎಂದು ತಿಳಿಸಿದರು.

‘ಮುಕ್ಕುಂದ ಸಮಿ ಕಂಪನಿ ವಿಸ್ತರಣೆಗೆ ಪರವಾನಗಿ ನೀಡಿದ್ದು, ಅಧಿವೇಶನ ವೇಳೆ ಜಿಲ್ಲೆಯ ಜನರ ಅಭಿಪ್ರಾಯ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇವೆ. ಮತ್ತೊಂದು ನಿಯೋಗ ಕರೆದೊಯ್ದು ಒತ್ತಾಯಿಸುತ್ತೇವೆ. ಕಾರ್ಖಾನೆ ವಿಸ್ತರಣೆಗೆ ಅನುಮತಿ ಲಭಿಸಿದ್ದರೂ ಜನರ ಹಿತದೃಷ್ಟಿಯಿಂದ ರದ್ದುಪಡಿಸಬೇಕಾಗುತ್ತದೆ. ಇದಕ್ಕೆ ಎದುರಾಗುವ ಕಾನೂನು ತೊಡಕುಗಳ ಬಗ್ಗೆಯೂ ಚರ್ಚಿಸಲಾಗುವುದು’ ಎಂದು ಹೇಳಿದರು.

‘ಬಿಜೆಪಿಯವರಿಗೆ ಪರಿಶಿಷ್ಟರ ಬಗ್ಗೆ ಹಾಗೂ ಸಮಾಜದ ಕಟ್ಟಕಡೆಯವರ ಬಗ್ಗೆ ಮಾತನಾಡುವ ಹಕ್ಕಿಲ್ಲ. ಕಾಂತರಾಜ್ ವರದಿ ತಯಾರಿಸಿದ ಏಳು ವರ್ಷಗಳ ತನಕ ಬಿಜೆಪಿಯವರು ಯಾಕೆ ಸುಮ್ಮನಿದ್ದರು?. ಸಮೀಕ್ಷೆ ಬಳಿಕ ನಿಖರತೆ ತಿಳಿಯಲಿದೆ. ಕಳೆದ ಬಾರಿ ಸಮೀಕ್ಷೆಯಿಂದ ಕೆಲವರನ್ನು ಕೈ ಬಿಡಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ವರದಿ ನಿಖರವಾಗಿ ಆದರೆ ಹೇಗೆ ಎನ್ನುವ ಭಯ ಬಿಜೆಪಿಯವರಿಗೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.