ತಾವರಗೇರಾ: ಪಟ್ಟಣದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರದಿಂದ ಮೂಲಸೌಕರ್ಯಗಳ ವ್ಯವಸ್ಥೆ ಆಗಬೇಕು. ಅದರಂತೆ ಪ್ರತಿ ಅಂಗನವಾಡಿಗೆ ಸಮರ್ಪಕ ಸಿಬ್ಬಂದಿ ನಿಯೋಜನೆ ಮಾಡಿದರೆ ಪೂರಕ ಶಿಕ್ಷಣ ಸಿಗಲು ಸಾಧ್ಯ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಹೇಳಿದರು.
ಸ್ಥಳೀಯ 9ನೇ ವಾರ್ಡ್‌ನ 17ನೇ ಅಂಗನವಾಡಿ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ‘ಪ.ಪಂ ಆಡಳಿತದಿಂದ ಪ್ರತಿ ಕೇಂದ್ರಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಅಗತ್ಯ ಸಹಕಾರ ನೀಡಲು ನಮ್ಮ ಅಧಿಕಾರಿಗಳು, ಜನಪ್ರತಿನಿಧಿಗಳು ಬದ್ಧರಾಗಿದ್ದೇವೆ’ ಎಂದರು.
ವಲಯ ಮೇಲ್ವಿಚಾರಕಿ ದುರಗಮ್ಮ ಪಾಟೀಲ ಮಾತನಾಡಿ, ‘ಈ ಕೇಂದ್ರದ ಕೊಠಡಿಯು 2022–23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆ ಅಡಿ ನಿರ್ಮಾಣ ಮಾಡಲಾಗಿದೆ. ಪಟ್ಟಣದ ಇನ್ನೂ ಕೆಲವು ಅಂಗನವಾಡಿ ಕೇಂದ್ರಗಳು ಇಪ್ಪತ್ತು ವರ್ಷ ಹಳೆಯದಾಗಿವೆ. ಸ್ಥಳಾವಕಾಶ ಕಡಿಮೆ ಕಾರಣ ಚಿಕ್ಕ ಕೊಠಡಿಯಲ್ಲಿಯೇ ಆಟ– ಪಾಠ ಮತ್ತು ಆಹಾರ ಧಾನ್ಯ ಸಂಗ್ರಹ ಮಾಡಲಾಗುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ’ ಎಂದರು.
‘ಕೇಂದ್ರಗಳ ಹಳೆ ಕೊಠಡಿಗಳಿಗೆ ಹೆಚ್ಚುವರಿ ಕೊಠಡಿ ಅವಶ್ಯವಿದ್ದು, ಪಟ್ಟಣ ಪಂಚಾಯಿತಿ ಆಡಳಿತದಿಂದ ಜಾಗ ಗುರುತಿಸಿದರೆ ಇಲಾಖೆಗೆ ಕ್ರೀಯಾಯೋಜನೆ ಮಾಡಿ ಕಳಿಸಲಾಗುವುದು’ ಎಂದು ಮನವಿ ಮಾಡಿದರು.
ಪ.ಪಂ ಉಪಾಧ್ಯಕ್ಷೆ ದುರಗಮ್ಮ ಶಿರವಾಟಿ, ಮುಖ್ಯಾಧಿಕಾರಿ ಮಹೇಶ ಅಂಗಡಿ, ಸದಸ್ಯರಾದ ದಶರಥಸಿಂಗ್, ಶ್ಯಾಮಣ್ಣ ಭಜಂತ್ರಿ, ಬೇಬಿರೇಖಾ ಉಪ್ಪಳ, ಹಸೀನಾ ಬೇಗಂ, ಶ್ರೀನಿವಾಸ ನಿಡಶೇಸಿ, ಶಿವನಗೌಡ ಪುಂಡಗೌಡರ, ನಾಮನಿರ್ದೇಶನ ಸದಸ್ಯ ರುದ್ರಗೌಡ ಕುಲಕರ್ಣಿ, ಪ್ರಮುಖರಾದ ಖಾಜಾಸಾಬ ನಾಲಗಾರ, ದೊಡ್ಡಪ್ಪ, ತಾಲ್ಲೂಕು ಸಂಯೋಜಕಿ ಭಾಗ್ಯಶ್ರೀ ಹೊಸಮನಿ, ಸಿಐಟಿಯು ರಾಜ್ಯಾಧ್ಯಕ್ಷೆ ಕಲಾವತಿ, ಅಂಗನಾವಾಡಿ ಕಾರ್ಯಕರ್ತೆ ರೇಷ್ಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.