ADVERTISEMENT

ಕೊಪ್ಪಳ | ಆನ್‌ಲೈನ್‌ ಪರೀಕ್ಷೆ ರದ್ದತಿಗೆ ಒತ್ತಾಯ

ನಗರದ ಜಿಲ್ಲಾಡಳಿತಭವನದ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 13:38 IST
Last Updated 25 ಡಿಸೆಂಬರ್ 2019, 13:38 IST
ಕೊಪ್ಪಳದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಐಟಿಐ ಕಾಲೇಜುಗಳಲ್ಲಿ ಆನ್‌ಲೈನ್‌ ಪರೀಕ್ಷಾ ಪದ್ದತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಎಐಡಿವೈಓ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರು
ಕೊಪ್ಪಳದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಐಟಿಐ ಕಾಲೇಜುಗಳಲ್ಲಿ ಆನ್‌ಲೈನ್‌ ಪರೀಕ್ಷಾ ಪದ್ದತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಎಐಡಿವೈಓ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರು   

ಕೊಪ್ಪಳ: ಐಟಿಐ ಕಾಲೇಜುಗಳಲ್ಲಿ ಆನ್ಲೈನ್ ಪರೀಕ್ಷಾ ಪದ್ದತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ವಿದ್ಯಾರ್ಥಿಗಳು ಎಐಡಿವೈಓ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಡಿ.ಜಿ.ಇ.ಟಿ ಜಾರಿಗೆ ತರಲು ಉದ್ದೇಶಿಸಿರುವ ಆನ್‌ಲೈನ್ ಪರೀಕ್ಷಾ ಪದ್ಧತಿಯು ಲಕ್ಷಾಂತರ ಐಟಿಐ ತರಬೇತಿ ಪಡೆಯುತ್ತಿರುವವರು ಮತ್ತು ತರಬೇತಿದಾರರನ್ನು ಗೊಂದಲಕ್ಕೆ ತಳ್ಳಿದೆ. 2019ರ ವರ್ಷದ ಪರೀಕ್ಷಾ ಫಲಿತಾಂಶವು ಇನ್ನೂ ಹೊರಬಿದ್ದಿಲ್ಲ. ಸಪ್ಲಿಮೆಂಟರಿ ಪರೀಕ್ಷೆಗೆ ಕೊನೆಯು ದಿನಾಂಕವೂ ಮುಗಿದಿದೆ. ಆದರೆ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಇದರ ಜತೆಯಲ್ಲಿ ಇದೇ ಮೊದಲ ಬಾರಿಗೆ ಐಟಿಐ ಪರೀಕ್ಷಾ ಶುಲ್ಕಕ್ಕೆ ಜಿ.ಎಸ್.ಟಿ ಹಾಕುವ ಪದ್ಧತಿ ಜಾರಿಗೆ ಬಂದಿದೆ. ಇವು ಅತ್ಯಂತ ಖಂಡನೀಯ ಎಂದುಎಐಡಿವೈಓ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಆರ್ಥಿಕವಾಗಿ ಅತ್ಯಂತ ದುರ್ಬಲ ಕುಟುಂಬಗಳಿಂದ ಬರುವ ಐಟಿಐ ವಿದ್ಯಾರ್ಥಿಗಳಿಗೆ ಈ ಪರೀಕ್ಷಾ ಶುಲ್ಕವೇ ಒಂದು ಗದಾ ಪ್ರಹಾರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಡಿ.ಜಿ.ಇ.ಟಿ ಹೊಸ ಪರೀಕ್ಷಾ ಪದ್ಧತಿ ಜಾರಿಗೆ ತರಲು ಸುತ್ತೋಲೆ ಹೊರಡಿಸಿರುವುದು ಅತ್ಯಂತ ಖಂಡನೀಯ. ಏಕೆಂದರೆ ಮೊದಲಿಗೆ ಐಟಿಐ ತರಬೇತಿಯು ಕೌಶಲ ಕಾರ್ಯ ಕಲಿಕೆಗೆ ಹೆಚ್ಚು ಒತ್ತು ಇರುವ ತರಬೇತಿ. ಅಲ್ಲಿ ಪ್ರಾಯೋಗಿಕತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅದಕ್ಕಾಗಿಯೇ ಅದನ್ನು ಕೈಗಾರಿಕಾ ತರಬೇತಿ ಎಂದು ಕರೆಯುವುದು. ಒಬ್ಬ ವ್ಯಕ್ತಿ ತರಬೇತಿ ಪೂರೈಸಿದ ಬಳಿಕ ಆತನ ಕಲಿಕೆಯ ಮಟ್ಟವನ್ನು ತುಲನೆ ಮಾಡಲು ಆತನ ಕಾರ್ಯಕೌಶಲ ನೀಡಿ ಮೌಲ್ಯಮಾಪನ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

ಈ ಕುರಿತು ಜಿಲ್ಲಾಧಿಕಾರಿ ಪರವಾಗಿ ಡಿಡಿಪಿಯು ಐ.ಎ.ರಾಟಿಮನಿ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜಿಲ್ಲಾ ಸಂಘಟನಾಕಾರ ರಾಯಣ್ಣ ಗಡ್ಡಿ, ವಿದ್ಯಾರ್ಥಿಗಳಾದ ಕೊಟ್ರೇಶ, ಸಣ್ಣ ಭೀಮನಗೌಡ, ವೀರೇಂದ್ರ, ಅಲ್ತಾಫ್, ಗಂಗನಗೌಡ, ಮಾರುತಿ, ಷಣ್ಮುಖ, ರಂಜಾನ್, ಸಣ್ಣ ಭೀಮನಗೌಡ, ಭೀಮೇಶ್, ಲೋಕೇಶ, ದೇವರಾಜ, ರಾಮು, ಪ್ರಕಾಶ, ಹನುಮನಗೌಡ, ಅಶೋಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.