ಕೊಪ್ಪಳ:ಪ್ರತಿವರ್ಷ ಯೋಗ ದಿನ ಆಚರಿಸುವ ಮೂಲಕ ಯೋಗಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರಕಿಸಿರುವ ಕೇಂದ್ರ ಸರ್ಕಾರವು ಈಗ ಅಂತರರಾಷ್ಟ್ರೀಯ ಯೋಗ ವಿಶ್ವವಿದ್ಯಾಲಯ ಸ್ಥಾಪಿಸಲು ಚಿಂತನೆ ನಡೆಸಿದೆ. ಇದಕ್ಕೆ ಪೂರಕ ಎಂಬಂತೆ ವಿಶ್ವವಿದ್ಯಾಲಯ ಸ್ಥಾಪನೆಗೆ ಜಿಲ್ಲೆಯ ಆನೆಗೊಂದಿಯನ್ನು ಆಯ್ಕೆ ಮಾಡುವಂತೆ ಕೋರಲಾಗಿದೆ.
ಅಂತರರಾಷ್ಟ್ರೀಯ ಯೋಗ ವಿಶ್ವವಿದ್ಯಾಲಯ ಸ್ಥಾಪನೆಗೆ ಆನೆಗೊಂದಿ ಸೂಕ್ತ ಸ್ಥಳವೆಂದು ಸಂಸದ ಕರಡಿ ಸಂಗಣ್ಣ ಈಚೆಗೆ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ ಪ್ರಹ್ಲಾದ ಸಿಂಗ್ ಪಟೇಲ್ ಅವರಿಗೆ ಪತ್ರ ಬರೆದಿದ್ದಾರೆ. ಆನೆಗೊಂದಿ ಸ್ಥಳದ ಮಹಿಮೆ, ಹಿರಿಮೆ, ಗರಿಮೆ ಕುರಿತು ವಿವರಿಸಿದ್ದಾರೆ.
ವಿಶ್ವ ಪಾರಂಪರಿಕ ತಾಣ ವಾದಇತಿಹಾಸ ಪ್ರಸಿದ್ಧ ಹಂಪಿ ಬಳಿ ಆನೆಗೊಂದಿ ಇದೆ. ಆನೆಗೊಂದಿ ರಾಮಾಯಣ, ಮಹಾಭಾರತ ಕಾಲದಿಂದಲೂ ಇರುವ ಪೌರಾಣಿಕ, ಐತಿಹಾಸಿಕ ಸ್ಥಳ. ಶಬರಿ ರಾಮನಿಗಾಗಿ ಕಾದು ಕುಳಿತ ಜಾಗ, ವಾನರ ದೊರೆ ಸುಗ್ರೀವನ ನಾಡು, ಹನುಮಂತಜನಿಸಿದ ಅಂಜನಾದ್ರಿ, ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣದೇವರಾಯನ ಸಮಾಧಿ, ಬ್ರಾಹ್ಮಣ ಸಮುದಾಯದ ಪ್ರಸಿದ್ಧ 9 ಯತಿಗಳ ನವವೃಂದಾವನ ಗಡ್ಡೆ, ಋಷ್ಯಶೃಂಗ ಪರ್ವತ. ಕಡೆಬಾಗಿಲು, ಪ್ರಾಕೃತಿಕ ಸೌಂದರ್ಯ ಹೊಂದಿದೆ ವಿರೂಪಾಪುರ ಗಡ್ಡೆ, ಸಣಾಪುರ ಆನೆಗೊಂದಿಸಮೀಪ ಇವೆ.
ಇಲ್ಲಿ ದೇಶ-ವಿದೇಶಗಳಿಂದ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಇಲ್ಲಿ ಅಂತಾರಾಷ್ಟ್ರೀಯ ವಿಶ್ವ ವಿದ್ಯಾಲಯ ಸ್ಥಾಪನೆಯಾದಲ್ಲಿ ಇಲ್ಲಿನ ಇತಿಹಾಸ ರಕ್ಷಿಸಿ, ಬೆಳೆಸಲು ಸಹಕಾರಿಯಾಗುತ್ತದೆ. ಯೋಗ ಪದ್ಧತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪ್ರಚಾರಪಡಿಸಿದಂತಾಗುವುದೆಂದು ಕೇಂದ್ರ ಸಚಿವರಿಗೆ ಮನವರಿಕೆ ಮಾಡಲಾಗಿದ್ದು, ಅವರಿಂದ ಸಕರಾತ್ಮಕ ಸ್ಪಂದನೆ ಸಿಕ್ಕಿದೆ’ ಎಂದು ಸಂಸದಕರಡಿ ಸಂಗಣ್ಣ ತಿಳಿಸಿದರು.
‘ಯೋಗ ವಿಶ್ವವಿದ್ಯಾಲಯ ಸ್ಥಾಪನೆಯಾದಲ್ಲಿ ಯೋಗದ ಕುರಿತ ವೈಜ್ಞಾನಿಕ ಮಾಹಿತಿ, ಅವಶ್ಯಕತೆ, ವಿವಿಧ ಆಸನ ಗಳು, ಪ್ರಾಮುಖ್ಯತೆ ಕುರಿತು ಹೆಚ್ಚಿನ ಅಧ್ಯಯನ ಮಾಡಬಹುದು.ಅಂತರರಾಷ್ಟ್ರೀಯ ಮಟ್ಟದಲ್ಲಿ ಖಾಸಗಿ ಯೋಗ ಕೇಂದ್ರಗಳಿದ್ದು, ವಿಶ್ವವಿದ್ಯಾಲಯವು ಇನ್ನಷ್ಟು ಮಾನ್ಯತೆ ಪಡೆಯಬಹುದು’ ಎಂದರು.
‘ವಿ.ವಿ. ಸ್ಥಾಪನೆಯಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯಲಿದ್ದು, ಸ್ಥಳವು ಪ್ರಸಿದ್ಧಿಗೆ ಬರಲಿದೆ. ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗಿದ್ದು, ಇದರ ಕುರಿತು ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ’ ಎಂದು ತಿಳಿದು ಬಂದಿದೆ.
**
ಆನೆಗೊಂದಿಯಲ್ಲಿಯೇ ಅಂತರರಾಷ್ಟ್ರೀಯ ಯೋಗ ವಿವಿ ಸ್ಥಾಪಿಸಿದರೆ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೂ ಮಹತ್ವ ನೀಡಿದಂತೆ ಆಗುತ್ತದೆ
-ಸಂಗಣ್ಣ ಕರಡಿ, ಕೊಪ್ಪಳ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.