ADVERTISEMENT

ಹೊನಲಾಗಿ ಹರಿದ ಐಪಿಎಲ್ ಸಂಭ್ರಮ

ಕೊಪ್ಪಳದಲ್ಲಿ ಆರ್‌ಸಿಬಿ, ಕೊಹ್ಲಿ ಅಭಿಮಾನಿಗಳ ಖುಷಿ, ಬೆಳಕಿನ ಚಿತ್ತಾರ

ಪ್ರಮೋದ ಕುಲಕರ್ಣಿ
Published 4 ಜೂನ್ 2025, 5:27 IST
Last Updated 4 ಜೂನ್ 2025, 5:27 IST
   

ಕೊಪ್ಪಳ: ಕಣ್ಣು ಹಾಯಿಸಿದಷ್ಟೂ ದೂರ ಆರ್‌ಸಿಬಿ ತಂಡದ ಪೋಷಾಕು, ಬಾನಂಗಳದಲ್ಲಿ ಬೆಳಕಿನ ಚಿತ್ತಾರ, ಜನರ ಸಂಭ್ರಮ, ದೊಡ್ಡ ಪರದೆಯಲ್ಲಿ ಕ್ರಿಕೆಟ್ ಹಬ್ಬ ಕಣ್ತುಂಬಿಕೊಂಡ ಖುಷಿ..

ಇದು ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಕಂಡುಬಂದ ಚಿತ್ರಣ. ಅಹಮದಾಬಾದಿನಲ್ಲಿ ನಡೆದ ಆರ್‌ಸಿಬಿ ಹಾಗೂ ಕಿಂಗ್ಸ್ ಪಂಜಾಬ್ ತಂಡಗಳ ನಡುವಿನ ಐಪಿಎಲ್ ಫೈನಲ್ ಪಂದ್ಯವನ್ನು ದೊಡ್ಡ ಪರದೆಯಲ್ಲಿ ತೋರಿಸಲು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ವ್ಯವಸ್ಥೆ ಮಾಡಿತ್ತು.

ಪಂದ್ಯ ಆರಂಭಕ್ಕೂ‌ ಸಾಕಷ್ಟು ಹೊತ್ತಿಗೂ ಮೊದಲು ಅಪಾರ ಸಂಖ್ಯೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಕ್ರೀಡಾಂಗಣದತ್ತ ಬಂದರು. ಆರಂಭದಿಂದಲೇ ತಮ್ಮ ನೆಚ್ಚಿನ ತಂಡ ಬೆಂಗಳೂರು ಗೆಲ್ಲಬೇಕು ಎಂದು ಪ್ರಾರ್ಥಿಸಿದರು. ಮೊದಲು ಬ್ಯಾಟಿಂಗ್ ‌ಮಾಡಿದ ಬೆಂಗಳೂರು ತಂಡದ ಆಟಗಾರರು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದಾಗ ಅಭಿಮಾನಿಗಳು ಕುಣಿದು ಸಂಭ್ರಮಿಸಿದರು. ದೊಡ್ಡ ಪರದೆಯ ಪಕ್ಕದಲ್ಲಿ‌ ಹಾಗೂ ಬಾನಂಗಳದಲ್ಲಿ ತರಹೇವಾರಿ ಬಣ್ಣಗಳ ಪಟಾಕಿಗಳು ಸಿಡಿದವು. ಡಿ.ಜೆ. ವ್ಯವಸ್ಥೆಯನ್ನೂ ಮಾಡಿದ್ದರಿಂದ ಅದರ ಸದ್ದಿನ ಅಬ್ಬರಕ್ಕೆ ಜನ ಕುಣಿದರು. ಆರ್‌ಸಿಬಿ, ತಂಡದ ಹೆಸರನ್ನು ಹಲವು ಬಾರಿ ಕೂಗಿ ಅಭಿಮಾನ ಮೆರೆದರು.

ADVERTISEMENT

ಪಂದ್ಯ ವೀಕ್ಷಿಸಲು ಕ್ರೀಡಾಂಗಣದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಆಸನಗಳು ಭರ್ತಿಯಾಗಿ ಬಹಳಷ್ಟು ಅಭಿಮಾನಿಗಳು ನಿಂತುಕೊಂಡು ‌ಪಂದ್ಯ ನೋಡಿದರೆ, ಇನ್ನೂ ಕೆಲವರು ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು. ಕ್ರೀಡಾಂಗಣದಲ್ಲಿದ್ದ ಯುವಕರು ಹಾಗೂ‌‌ ಮಕ್ಕಳಲ್ಲಿ ಬಹುತೇಕರು ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಅವರ ಪೋಷಾಕಿನ ಸಂಖ್ಯೆ 18 ಧರಿಸಿ ತಮ್ಮ ಅಭಿಮಾನ ತೋರಿದರು. ದೊಡ್ಡ ಪರದೆಯಲ್ಲಿ ವಿರಾಟ್ ಕೊಹ್ಲಿಯನ್ನು ಪ್ರಧಾನವಾಗಿ ತೋರಿಸಿದಾಗಲೆಲ್ಲ ಯುವಜನತೆಯ ಕುಣಿತ, ಸಂಭ್ರಮ, ಡಿ.ಜೆ. ಸದ್ದಿನ ಅಬ್ಬರ, ಕಣ್ಣು ಕೊರೈಸುವ ಬೆಳಕು, ಆರ್‌ಸಿಬಿ ಫ್ಲಾಗ್ ರಾರಾಜಿಸಿದವು. ಬೆಂಗಳೂರು ತಂಡದ ಫೀಲ್ಡಿಂಗ್ ಆರಂಭವಾಗುತ್ತಿದ್ದಂತೆ ಫಲಿತಾಂಶದ ಕುತೂಹಲದಿಂದ ಯುವಜನತೆ ಖುರ್ಚಿ ಮೇಲೆ ನಿಂತುಕೊಂಡೇ ಕೊನೆಯ ತನಕ ಪಂದ್ಯ ವೀಕ್ಷಿಸಿದ್ದು ವಿಶೇಷವಾಗಿತ್ತು.

ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಅನೇಕರು ಪಂದ್ಯ ವೀಕ್ಷಿಸಿದರು. ಪಂದ್ಯ ನೋಡಲು ಬಂದಿದ್ದ ಎಲ್ಲರಿಗೂ ಹಲವು ಕೌಂಟರ್ ಮಾಡಿ ಉಪಾಹಾರ ಹಾಗೂ ನೀರಿನ ವ್ಯವಸ್ಥೆಯನ್ನು ಸಂಘಟಕರೇ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.