ADVERTISEMENT

ಚುನಾವಣೆಯಲ್ಲಿ ಕೆಆರ್‌ಪಿಪಿ ಶಕ್ತಿ ತಿಳಿಯಲಿದೆ: ಜನಾರ್ದನ ರೆಡ್ಡಿ

ಗಂಗಾವತಿ ಬಿಟ್ಟು ಎಲ್ಲೂ ಹೋಗಲ್ಲ: ಜನಾರ್ದನ ರೆಡ್ಡಿ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 6:24 IST
Last Updated 5 ಜನವರಿ 2023, 6:24 IST
ಗಂಗಾವತಿಯ ಎಸ್.ಎಸ್.ಕೆ ಸಮಾಜದ ರಾಜ್ಯಾಧ್ಯಕ್ಷ ಕೃಷ್ಣಸಾ. ವೈ ದಲಬಂಜನ್ ನಿವಾಸದಲ್ಲಿ ಕ್ಷತ್ರಿಯ ಸಮಾಜದವರು ಜನಾರ್ದನರೆಡ್ಡಿ ಅವರನ್ನ ಸನ್ಮಾನಿಸಿದರು
ಗಂಗಾವತಿಯ ಎಸ್.ಎಸ್.ಕೆ ಸಮಾಜದ ರಾಜ್ಯಾಧ್ಯಕ್ಷ ಕೃಷ್ಣಸಾ. ವೈ ದಲಬಂಜನ್ ನಿವಾಸದಲ್ಲಿ ಕ್ಷತ್ರಿಯ ಸಮಾಜದವರು ಜನಾರ್ದನರೆಡ್ಡಿ ಅವರನ್ನ ಸನ್ಮಾನಿಸಿದರು   

ಗಂಗಾವತಿ: ‘ಬಸವಣ್ಣನ ತತ್ವ, ಸಿದ್ಧಾಂತದ ಆಧಾರದಲ್ಲಿ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಏನೆಂಬುದು ಮುಂದಿನ ಚುನಾವಣೆಯಲ್ಲಿ ರಾಜ್ಯಕ್ಕೆ, ದೇಶಕ್ಕೆ ತಿಳಿಯಲಿದೆ’ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ರಾಜ್ಯ ಎಸ್.ಎಸ್.ಕೆ ಸಮಾಜದ ರಾಜ್ಯಾಧ್ಯಕ್ಷ ಕೃಷ್ಣಸಾ. ವೈ ದಲಬಂ ಜನ್ ನಿವಾಸದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ನಾನು ಯಾವ ಪಕ್ಷವನ್ನು ಟಾರ್ಗೆಟ್ ಮಾಡಿಲ್ಲ. ಅಭಿಮಾನಿಗಳು, ಸಮಾಜಗಳ ಮುಖಂಡರು ಪ್ರೀತಿಯಿಂದ ನಿವಾಸಕ್ಕೆ ಆಹ್ವಾನ ನೀಡುತ್ತಿದ್ದು, ಹೋಗುತ್ತಿದ್ದೇನೆ. ಯಾರಿಗೂ ಗಾಳ ಹಾಕ್ತ ಇಲ್ಲ’ ಎಂದರು.

ADVERTISEMENT

‘ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ, ಬಳ್ಳಾರಿ, ಗದಗ, ರಾಯಚೂರು ಜಿಲ್ಲೆಗಳಿಗೆ ಹೆಚ್ಚಾಗಿ ಓಡಾಡುತ್ತಿದ್ದು, ಇನ್ನು ಮುಂದೆ ಗಂಗಾವತಿಯಲ್ಲಿಯೇ ಇರಲಿದ್ದೇನೆ. ಜ.16ರ ನಂತರ ಪಕ್ಷದ ರಾಜಕೀಯ ಪ್ರಣಾಳಿಕೆಗಳ ಪ್ರಕಾರ ಹಂತ ಹಂತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಾ, ಎಲ್ಲ ಕ್ಷೇತ್ರಗಳಲ್ಲಿ ಸಂಚಾರ ನಡೆಸಿ, ಚುನಾವಣೆ ಕಣಕ್ಕೆ ಸಿದ್ಧತೆ ನಡೆಸಲಾಗುತ್ತದೆ. ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ’ ಎಂದರು.

ಪಕ್ಷ ಘೋಷಣೆ ನಂತರ ಗಂಗಾವತಿಗೆ ಮೊದಲ ಬಾರಿಗೆ ಮಂಗಳವಾರ ಬಂದಿದ್ದ ರೆಡ್ಡಿ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದರು. ಬಳಿಕ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ರೆಡ್ಡಿ ತೆರಳಿದ್ದರು.

ರೆಡ್ಡಿಗೆ ಟಗರು ವಿತರಣೆ: ನಗರದ ರೆಡ್ಡಿ ನಿವಾಸದ ಬಳಿ ಅಭಿಮಾನಿ ಪುಂಡಗೌಡ ಅವರು ರೆಡ್ಡಿ ಅವರಿಗೆ ಶಾಲು ಹೊದಿಸಿ, ದೇಣಿಗೆಯಾಗಿ ಟಗರು ನೀಡಿದರು.

ನಂತರ ಮಾತನಾಡಿ, ರೆಡ್ಡಿ ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ 101 ಟಗರು ನೀಡುವುದಾಗಿ ತಿಳಿಸಿದ್ದು, ಸಾಂಕೇತಿಕವಾಗಿ ಇಂದು 1 ನೀಡಿ, ಉಳಿದ 100 ಟಗರು ಚುನಾವಣೆಯ ನಾಮಪತ್ರ ಸಲ್ಲಿಕೆ ದಿನ ನೀಡಲಾಗುತ್ತದೆ ಎಂದರು.

ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಕೃಷ್ಣಾಸಾ ದಲಂಬಜನ್, ಅನು ಅಕ್ಕಾ, ಯಮುನುಸಾ ಜರತಾಕರ್, ತಿಪ್ಪಣ್ಣ ಬಿರದಕರ, ಸಾರಿ ನಾಥ, ಸಿದ್ಧುಗೌಳಿ, ವೆಂಕಟೇಶ, ಸುನಿಲ್ ಕಾಟವಾ, ಹನುಮಂತಸಾ, ನಿರಂಜನ್, ರಾಘವೇಂದ್ರ, ಶ್ರೀರಾಮ ಕಲಾಲ, ಚಂದ್ರು, ನರಹರಿ, ನಿರಂಜನ, ನಗರಸಭೆ ಸದಸ್ಯ ಶರಬೋ ಜಿರಾವ್, ದೇವರಾಜ ಗೌಳಿ, ಮೋಹನ್ ಕಾಟವಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.