
ಕೊಪ್ಪಳ: ನೌಕರಿ ಕೊಡಿಸುತ್ತೇವೆ, ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಒದಗಿಸಿಕೊಡುತ್ತೇವೆ ಎನ್ನುವ ಸುಳ್ಳು ಕಾರಣಗಳನ್ನು ಹೇಳಿ ಜನರನ್ನು ವಂಚಿಸುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇದ್ದರೂ, ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದ್ದರೂ ಜನ ಮಾತ್ರ ಇಂಥ ವಂಚನೆಗಳಿಗೆ ಬಲಿಯಾಗುತ್ತಿರುವುದು ನಿರಂತರವಾಗಿ ನಡೆಯುತ್ತಲೇ ಇದೆ.
ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಹೊಸ ವರ್ಷದಲ್ಲಿ ಎರಡನೇ ಎಫ್ಐಆರ್ ದಾಖಲಾಗಿದ್ದು, ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಹನುಮಂತ ಎನ್ನುವವರಿಗೆ ₹35.55 ಲಕ್ಷ ವಂಚಿಸಲಾಗಿದೆ.
ಅಪರಿಚಿತ ವ್ಯಕ್ತಿಗಳು ವ್ಯಾಟ್ಸ್ ಆ್ಯಪ್ ಹಾಗೂ ಟೆಲಿಗ್ರಾಂ ಸಾಮಾಜಿಕ ತಾಣಗಳ ಮೂಲಕ ಹನುಮಂತ ಅವರನ್ನು ಪರಿಚಯಿಸಿಕೊಂಡು ರೆಸ್ಟೋರೆಂಟ್ ಮೂಲಕ ಆಹಾರ ಆರ್ಡರ್ ಮಾಡುವ ಕೆಲಸ ಹಚ್ಚಿ ಅರೆಕಾಲಿಕವಾಗಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ. ವೆಬ್‌ಸೈಟ್ ಒಂದರ ಲಿಂಕ್ ಕಳಿಸಿ ಅದರಲ್ಲಿ ಖಾತೆ ತೆಗೆಯಿಸಿ ಹನುಮಂತ ಅವರ ವಿವಿಧ ಐದು ಬ್ಯಾಂಕ್‌ಗಳ ಖಾತೆ ಮೂಲಕ ಹಣ ಹಾಕಿಸಿಕೊಂಡು ಮೋಸ ಮಾಡಲಾಗಿದೆ. 2025ರ ನವೆಂಬರ್ 20ರಿಂದ ಡಿ. 30ರ ಅವಧಿಯಲ್ಲಿ ಹಣ ಹಾಕಿಸಿಕೊಂಡು ಲಾಭದ ಬಗ್ಗೆ ಹಾಗೂ ಹಣದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಇಲ್ಲಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.