ADVERTISEMENT

ಕಲ್ಯಾಣ ಕರ್ನಾಟಕ ಉತ್ಸವ | ಸಚಿವ ತಂಗಡಗಿ ಧ್ವಜಾರೋಹಣ: ವಿಮೋಚನಾ ಹೋರಾಟದ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 4:33 IST
Last Updated 17 ಸೆಪ್ಟೆಂಬರ್ 2025, 4:33 IST
   

ಕೊಪ್ಪಳ: ಕಲ್ಯಾಣ ಕರ್ನಾಟಕ ಉತ್ಸವ ದಿನದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಿಜಾಮರ ವಿರುದ್ದ ನಡೆದ ವಿಮೋಚನಾ ಹೋರಾಟದ ನೆನಪಿಸಿಕೊಂಡರು.

ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಲಭಿಸಿದರೂ ಹೈದರಾಬಾದ್ ಪ್ರಾಂತ್ಯವನ್ನು ನಿಜಾಮರು ತಮ್ಮ ಕಪಿಮು಼ಷ್ಠಿಯಲ್ಲಿ ಇಟ್ಟುಕೊಂಡಿದ್ದರು. ಹೀಗಾಗಿ ಈಗಿನ ಕಲ್ಯಾಣ ಕರ್ನಾಟಕದ ಜನರಿಗೆ ಒಂದು ವರ್ಷ ತಡವಾಗಿ ಸ್ವಾತಂತ್ರ್ಯದ ಖುಷಿ ಲಭಿಸಿತು ಎಂದು ತಂಗಡಗಿ ಸ್ಮರಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನಾಗಿದೆ. ಜನರ ಆರ್ಥಿಕ ಸ್ಥಿತಿಯೂ ಸುಧಾರಣೆಯಾಗಿದೆ. ಶಕ್ತಿ ಯೋಜನೆ, ಗೃಹಜ್ಯೋತಿ, ಯುವನಿಧಿ, ಗೃಹ ಲಕ್ಷ್ಮಿ ಹೀಗೆ ಅನೇಕ ಯೋಜನೆಗಳು ಜನರಿಗೆ ಅನುಕೂಲ ಒದಗಿಸಿವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮೂಲಕವೂ ಅನುದಾನ ಪಡೆದು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದರು.

ADVERTISEMENT

ಮಂಡಳಿಯ ಅನುದಾನದಲ್ಲಿ ಮೈಕ್ರೊ ವಲಯದಲ್ಲಿ ₹236.69 ಕೋಟಿ, ಮ್ಯಾಕ್ರೊ ವಲಯದಲ್ಲಿ ₹99.68 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಇದಕ್ಕೂ‌‌ ಮೊದಲು ಅವರು ವಿವಿಧ ಶಾಲೆಗಳ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ, ಎನ್ ಸಿಸಿ, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಪೊಲೀಸರ ತಂಡಗಳಿಂದ ನಡೆದ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.