ADVERTISEMENT

ಗಂಗಾವತಿ: ಕಂಪ್ಲಿ ಸೇತುವೆ ಮೇಲಿನ ತ್ಯಾಜ್ಯ ತೆರವು

ತುಂಗಭದ್ರಾ ಜಲಾಶಯದ ಒಳಹರಿವು ಇಳಿಮುಖ: ಕಂಪ್ಲಿ ಸೇತುವೆ ಮೇಲೆ ಪ್ರವಾಹ ಇಳಿಕೆ, ವಾಹನ ಸಂಚಾರ ಬಂದ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 6:33 IST
Last Updated 28 ಜುಲೈ 2021, 6:33 IST
ಕೊಪ್ಪಳ ಜಿಲ್ಲೆಯ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ಎಲ್ಲ ಕ್ರಸ್ಟ್ ಗೇಟುಗಳ ಮೂಲಕ ನದಿಗೆ ಹರಿಬಿಡಲಾಗುತ್ತಿದೆ. ರಾತ್ರಿ ಹೊತ್ತು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಜಲಾಶಯದ ಮನಮೋಹಕ ನೋಟಪ್ರಜಾವಾಣಿ ಚಿತ್ರ: ಭರತ್ ಕಂದಕೂರ
ಕೊಪ್ಪಳ ಜಿಲ್ಲೆಯ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ಎಲ್ಲ ಕ್ರಸ್ಟ್ ಗೇಟುಗಳ ಮೂಲಕ ನದಿಗೆ ಹರಿಬಿಡಲಾಗುತ್ತಿದೆ. ರಾತ್ರಿ ಹೊತ್ತು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಜಲಾಶಯದ ಮನಮೋಹಕ ನೋಟಪ್ರಜಾವಾಣಿ ಚಿತ್ರ: ಭರತ್ ಕಂದಕೂರ   

ಗಂಗಾವತಿ: ಕಂಪ್ಲಿ–ಗಂಗಾವತಿ ಸೇತುವೆ ಮೇಲಿನ ಪ್ರವಾಹ ಮಂಗಳವಾರ ಬೆಳಿಗ್ಗೆ ಇಳಿಮುಖವಾಗಿದೆ.

ಪ್ರವಾಹ ಇಳಿಮುಖವಾದ ಕೂಡಲೇ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುದರ್ಶನ್ ರೆಡ್ಡಿ ಅವರ ನೇತೃತ್ವದಲ್ಲಿ ಜೆಸಿಬಿ ಮೂಲಕ ಸೇತುವೆ ಮೇಲಿನ‌ ರಕ್ಷಣಾ ಕಂಬಿಗಳಿಗೆ ಸಿಲುಕಿದ ಕಸ ತೆರವು ಮಾಡಲಾಯಿತು.

ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅನುಮತಿ ನೀಡಿಲ್ಲ.

ADVERTISEMENT

ಕಳೆದ ಎರಡು ದಿನಗಳಿಂದ ನದಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಗ್ರಾಮಗಳಿಗೆ ನೀರು ನುಗ್ಗಿಲ್ಲ.

ಸಾಣಾಪುರ, ಸೇತುವೆ, ಹನುಮನಹಳ್ಳಿ, ದೇವಘಾಟ್, ಲಕ್ಷ್ಮಿಪುರ, ನಾಗನಳ್ಳಿ, ಚಿಕ್ಕಂಜಂತಕಲ್ ನದಿ ಭಾಗದ ಗದ್ದೆಗಳಲ್ಲಿ ಕಸ ಸಂಗ್ರಹವಾಗಿದೆ. ಬದುಗಳು ಕೊಚ್ಚಿ ಹೋಗಿವೆ. ಬಾಳೆ ಗಿಡಗಳು ನೆಲ ಕಚ್ಚಿವೆ.

ನೆರೆಗೆ ಹಲವು ರೈತರ ಬೆಳೆ ನಾಶವಾಗಿದೆ. ನೀರಿನ ಪ್ರಮಾಣ ಇಳಿಕೆ ಆದ ಮೇಲೆ ನಷ್ಟದ ಅಂದಾಜು ಸಿಗಲಿದೆ.

ಚಿಕ್ಕಜಂತಕಲ್, ನಾಗನಳ್ಳಿ, ಆನೆಗೊಂದಿ ಭಾಗದಲ್ಲಿ ಸಾರ್ವಜನಿಕರ ಬಳಕೆಗೆ ನೀರು ಪೂರೈಸಲು ನದಿಗೆ ಅಳವಡಿಸಿದ್ದ ಪೈಪ್‌ಲೈನ್‌ ತೆರವುಗೊಳಿಸಲಾಗಿದೆ.

ಈ ಭಾಗದ ಜನರು ನೀರಿನ ತೊಂದರೆ ಅನುಭವಿಸುತ್ತಿದ್ದಾರೆ.

ವಿರುಪಾಪುರಗಡ್ಡೆ–ಹಂಪಿ ಸಂಪರ್ಕ ಕಡಿತವಾಗಿದೆ. ಆನೆಗೊಂದಿಯ ಶ್ರೀಕೃಷ್ಣದೇವರಾಯರ ಸಮಾಧಿ (64 ಸಾಲಿನ ಕಂಬಗಳ ದೇವಸ್ಥಾನ) ಭಾಗಶಃ ಮುಳುಗಡೆಯಾಗಿದೆ.

ಜಲಾನಯನ ಪ್ರದೇಶದಲ್ಲಿ ಮಳೆ ಇಳಿಮುಖವಾಗದ ಕಾರಣ ನೀರಿನ ಒಳ ಹರಿವು ಹೆಚ್ಚಳವಾಗುವ ನೀರಿಕ್ಷೆ ಇದೆ. ನೀರಿಕ್ಷೆಯಂತೆ ನೀರು ಹರಿದು ಬಂದರೆ ಹೆಚ್ಚುವರಿ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತದೆ. ಈ ವೇಳೆ ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ. ಆದ ಕಾರಣ ಸಂಪೂರ್ಣವಾಗಿ ಪ್ರವಾಹ ಇಳಿಮುಖವಾಗಿ ಜಿಲ್ಲಾಡಳಿತ ಅಧಿಕೃತವಾಗಿ ಆದೇಶ ನೀಡುವವರೆಗೂ ನದಿ ಬಳಿ ಸಾರ್ವಜನಿಕರು ತೆರಳಬಾರದು. ಜಾನುವಾರುಗಳನ್ನು ಸಹ ಬಿಡಬಾರದು ಎಂದು ತುಂಗಭದ್ರಾ ಜಲಾಶಯದ ಮಂಡಳಿ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.