ADVERTISEMENT

ಮಹನೀಯರು ಜೀವನ ಮಾದರಿಯಾಗಲಿ

ಕನಕದಾಸ ಜಯಂತಿ, ವಿಶ್ವ ಮಾನವ ದಿನಾಚರಣೆಯಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 14:44 IST
Last Updated 29 ಡಿಸೆಂಬರ್ 2018, 14:44 IST
ಸಮಾರಂಭದಲ್ಲಿ ಮಕ್ಕಳು ನೃತ್ಯ ಪ್ರದರ್ಶಿಸಿದರು
ಸಮಾರಂಭದಲ್ಲಿ ಮಕ್ಕಳು ನೃತ್ಯ ಪ್ರದರ್ಶಿಸಿದರು   

ಕೊಪ್ಪಳ: ಭಕ್ತ ಕನಕದಾಸರ ಮತ್ತು ಕುವೆಂಪು ಅವರು ಈ ನಾಡುಕಂಡಮಹನೀಯರಲ್ಲಿ ಒಬ್ಬರಾಗಿದ್ದು, ಅವರ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಅತ್ಯವಶ್ಯಕವಾಗಿದೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಶನಿವಾರ ಜಿಲ್ಲಾಡಳಿತದ ವತಿಯಿಂದ ಭಕ್ತ ಕನಕದಾಸರ ಜಯಂತಿ ಹಾಗೂ ವಿಶ್ವಮಾನವ ದಿನಾಚರಣೆ ಅಂಗವಾಗಿನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನಕದಾಸರು ಮನುಕುಲದ ಏಳ್ಗೆಗಾಗಿ ಹೋರಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಕನಕದಾಸರು ದಂಡನಾಯಕರಾಗಿದ್ದು, ತನ್ನ ಎಲ್ಲ ಸಂಪತ್ತನ್ನು ಬಿಟ್ಟು ಹರಿಭಕ್ತರಾಗಿ ಸಾಮಾಜಿಕ ಸುಧಾರಣೆಗಳನ್ನು ನಡೆಸಿದರು ಎಂದರು.

ADVERTISEMENT

ರಾಷ್ಟ್ರಕವಿ ಕುವೆಂಪು ಅವರು ಜಗತ್ತಿನ ಶ್ರೇಷ್ಠ ಕವಿಗಳಲ್ಲೊಬ್ಬರು. ಅವರು ರಚಿಸಿದ 'ಶ್ರೀರಾಮಾಯಣ ದರ್ಶನಂ' ಮಹಾಕಾವ್ಯ, ಆಧುನಿಕ ಕಾಲದ ಶ್ರೇಷ್ಠ ಕಾವ್ಯಗಳಲ್ಲೊಂದಾಗಿದೆ. ನಿಸರ್ಗದ ಬಗ್ಗೆ ಕುವೆಂಪು ಮನಸೋತಿದ್ದರು ಎಂದರು.

ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಿಂಗಪ್ಪ ಕಂಬಳಿ ಉಪನ್ಯಾಸ ನೀಡಿ,ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು ಕನಕದಾಸರು. ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಸುಮಾರು 316 ಕೀರ್ತನೆ ರಚಿಸಿದ್ದಾರೆ. ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಎಂಬ ಐದು ಮುಖ್ಯ ಕೃತಿಗಳಾವೆ. ಇವುಗಳಲ್ಲಿನೃಸಿಂಹಸ್ತವ ಕಾವ್ಯ ಉಪಲಬ್ಧವಿಲ್ಲ ಎಂದು ವಿಷಾದಿಸಿದರು.

ತಳಕಲ್ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಫಕೀರಪ್ಪ ವಜ್ರಬಂಡಿ ಉಪನ್ಯಾಸ ನೀಡಿ, ಕುವೆಂಪು ಮತ್ತು ಬೇಂದ್ರೆ ಅವರನ್ನು ಕರ್ನಾಟಕ ಸರಸ್ವತಿಯ ಎರಡು ಕಣ್ಣುಗಳು ಎಂದೇ ಬಿಂಬಿಸಲಾಗುತ್ತದೆ. ಈ ನಾಡಿನಲ್ಲಿ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಬಹುದಾದ ಶ್ರೇಷ್ಠ ಸಾಹಿತಿಗಳಲ್ಲಿ ಪ್ರಮುಖರು. ಕುವೆಂಪು ಅವರು ರಾಮಕೃಷ್ಣ ಪರಮಹಂಸರು, ಶಾರದಾ ಮಾತೆ, ಸ್ವಾಮಿ ವಿವೇಕಾನಂದರಂತಹ ಮಹನೀಯರಿಂದ ಪ್ರಭಾವಿತರಾಗಿದ್ದರು ಎಂದು ಹೇಳಿದರು.

ಪ್ರಕೃತಿ ಸೌಂದರ್ಯವನ್ನು, ಕರ್ನಾಟಕದ ಸೊಬಗನ್ನು ಕಣ್ಣಿಗೆ ಕಟ್ಟುವಂತೆ ಕುವೆಂಪು ರಚಿಸಿರುವ ಅನೇಕ ಕವಿತೆಗಳು ಜನರ ನಾಲಿಗೆಯ ಮೇಲೆ ಇಂದಿಗೂ ಹರಿದಾಡುತ್ತಿವೆ. ಪ್ರೀತಿ, ವಾತ್ಸಲ್ಯ, ಕರುಣೆ, ಮಾನವ ಗುಣ ದೋಷಗಳು, ಶೋಷಣೆ, ಮೂಢನಂಬಿಕೆ ಹೀಗೆ ಕುವೆಂಪು ಅವರು ಬರೆಯದ ವಸ್ತು ಹಾಗೂ ವಿಷಯಗಳೇ ಇಲ್ಲ ಎಂದರು.

ಜಿಲ್ಲಾ ಪಂಚಾಯಿತಿ ನೂತನ ಉಪಾಧ್ಯಕ್ಷೆ ರತ್ನವ್ವ ಭರಮಪ್ಪ ನಗರ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾತಂತ್ರ್ಯ ಯೋಧ ಸುಮಂತರಾವ್ ಪಟವಾರಿ, ಪ್ರಭಾರಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಡಿ.ಗೀತಾ, ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮಾದೇವಿ ಸೊನ್ನದ, ತಹಶೀಲ್ದಾರ ಜೆ.ಬಿ.ಮಜ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಬಾಗೇವಾಡಿ, ನಗರಸಭೆ ಸದಸ್ಯರಾದ ವಿರುಪಾಕ್ಷಪ್ಪ ಮೊರನಾಳ, ಅಕ್ಬರಪಾಶಾ ಪಲ್ಟನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.