
ಕನಕಗಿರಿ: ಐದು ದಶಕಗಳ ಕಾಲದಿಂದ ಉಪ ಮಾರುಕಟ್ಟೆ ಸ್ಥಾನ ಹೊಂದಿದ್ದ ಇಲ್ಲಿನ ಎಪಿಎಂಸಿ 2024ರ ಆಗಸ್ಟ್‌ನಲ್ಲಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಾಗಿ ಮೇಲ್ದರ್ಜೆಗೊಂಡಿದೆ. ಆದರೆ ನೂತನ ಎಪಿಎಂಸಿ ಮೂಲ ಸೌಲಭ್ಯಗಳಿಂದ ಬಳಲುತ್ತಿದೆ.
ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಅಧೀಕ್ಷಕ, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ಒಟ್ಟು ಆರೇಳು ಹುದ್ದೆಗಳು ಖಾಲಿ ಇದ್ದು, ಅಧಿಕಾರಿಗಳ ನಿಯೋಜನೆಯಿಂದ ಕಚೇರಿ ನಡೆಯುತ್ತಿದೆ. ಆಡಳಿತ ಕಚೇರಿ ಕಟ್ಟಡವು ಐದಾರು ದಶಕಗಳ ಹಿಂದೆ ನಿರ್ಮಾಣಮಾಡಿದ್ದು ಪೂರ್ಣ ಶಿಥಿಲಗೊಂಡು ಸೋರುತ್ತಿದೆ.
ಆವರಣದಲ್ಲಿರುವ ಎರಡು ಗೋದಾಮು ಕೂಡ ನಿರುಪಯುಕ್ತವಾಗಿದೆ. ಗೋದಾಮಿನಲ್ಲಿನ ದವಸಧಾನ್ಯ ಶುಚಿತ್ವಗೊಳಿಸುವ ಯಂತ್ರಗಳನ್ನು ಬಹಳಷ್ಟು ವರ್ಷಗಳಿಂದ ಬಳಸದ ಕಾರಣ ತುಕ್ಕು ಹಿಡಿದು ಹಾಳಾಗಿದೆ. ಗೋದಾಮು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗಂಗಾವತಿ ಎಪಿಎಂಸಿಯ ಏಜೆನ್ಸಿ ಮೂಲಕ ಒಟ್ಟು 3 ಜನ ಕಾವಲುಗಾರರು ಹಾಗೂ 2 ಜನ ಸ್ವಚ್ಛತಾ ಸಿಬ್ಬಂದಿ ನೇಮಕಗೊಂಡಿದ್ದು, ಈ ಸಿಬ್ಬಂದಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ವೇತನ ಅವರ ಖಾತೆಗೆ ನೇರವಾಗಿ ಹಾಕುವ ಬದಲು ನಗದು ಹಣ ನೀಡಲಾಗುತ್ತಿದೆ ಎಂದು ಸಿಬ್ಬಂದಿ ದೂರಿದ್ದಾರೆ.
ಕಲ್ಯಾಣ ಮಂಟಪ, ಕ್ಯಾಂಟೀನ್, ಶ್ರಮಿಕರ ಭವನ ಇತರೆ ಕಟ್ಟಡಗಳು ಸಹ ಎರಡು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದು, ಎಲ್ಲಾ ಕಟ್ಟಡಗಳ ಚಾವಣಿ ಕುಸಿಯುತ್ತಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಕ್ಯಾಂಟೀನ್ ಕಟ್ಟಡ ನಿರುಪಯುಕ್ತವಾಗಿದೆ. ದಲ್ಲಾಳಿ ವರ್ತಕರು ಹಾಗೂ ಹಮಾಲರಿಗೆ ಸಾಮೂಹಿಕ ಶೌಚಾಲಯವಿಲ್ಲ ಎಂದು ವರ್ತಕರು ತಿಳಿಸಿದರು.
ಆಡಳಿತ ಕಚೇರಿ ಕಟ್ಟಡದ ಪರಿಸರದಲ್ಲಿ ವಾರದ ಮೂರು ದಿನಗಳ ಕಾಲ ತರಕಾರಿ, ಕಾಯಿಪಲ್ಲೆ ಹರಾಜು ಪ್ರಕ್ರಿಯೆ ಹಾಗೂ ಮಾರಾಟ ನಡೆಯುತ್ತಿದೆ. ರೈತರಿಗೆ, ವ್ಯಾಪಾರಿಗಳಿಗೆ ಭದ್ರತೆ ಇಲ್ಲವಾಗಿದೆ. ಮಳೆಗಾಲದಲ್ಲಿ ರೈತರು, ವರ್ತಕರು ಮತ್ತು ಗ್ರಾಹಕರ ಪರಿಸ್ಥಿತಿ ಹೇಳತೀರದಾಗಿದೆ.
ಗೂಡಂಗಡಿಗಳನ್ನು ತೆರವುಗೊಳಿಸುವ ನೆಪದಲ್ಲಿ ಎಪಿಎಂಸಿಗೆ ಸೇರಿದ ಹೊರಗೋಡೆಯನ್ನು ಪಟ್ಟಣ ಪಂಚಾಯಿತಿಯವರು ಜೆಸಿಬಿ ಮೂಲಕ ಧ್ವಂಸ ಮಾಡಿದ್ದಾರೆ. ಆವರಣದಲ್ಲಿ ಅಲ್ಲಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು ಸ್ವಚ್ಛತೆ ಇಲ್ಲವಾಗಿದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಮದ್ಯ ಸೇವಿಸಿ ಖಾಲಿ ಬಾಟಲಿಗಳು ಬಿಸಾಕಿದ್ದಾರೆ ಎನ್ನುವ ದೂರುಗಳು ಸಾಮಾನ್ಯವಾಗಿವೆ.
ಎಪಿಎಂಸಿ ಮಳಿಗೆಗಳಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ದೂರಿ ಸ್ಥಳೀಯರು ಲೋಕಾಯುಕ್ತರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಪ್ರಭಾರಿಯಾಗಿ ಬಂದ ಅಧಿಕಾರಿಗಳು ಬಹಳ ದಿನಗಳ ಕಾಲ ಇಲ್ಲಿ ಉಳಿಯುತ್ತಿಲ್ಲ ಎಂದು ವಿವಿಧ ಸಂಘಟನೆಗಳ ಪ್ರಮುಖರು ತಿಳಿಸುತ್ತಾರೆ.
ಮಳಿಗೆಗಳ ನಿವೇಶನ ಹಂಚಿಕೆಯಲ್ಲಿ ಹಿರಿತನ ಹೊಂದಿರುವವರಿಗೆ ಅನ್ಯಾಯ ಮಾಡಲಾಗಿದೆ. ಪ್ರಭಾವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ದಲ್ಲಾಳಿ ವರ್ತಕ ಶರಣಪ್ಪ ಭಾವಿಕಟ್ಟಿ ಅವರು ದೂರಿದರು. ಒಬ್ಬ ವರ್ತಕನಿಗೆ ಎರಡು ಮಳಿಗೆಗಳು ಸಿಕ್ಕಿವೆ, ಹಲವಾರು ವರ್ಷಗಳಿಂದಲೂ ಅಂಗಡಿ ಹೊಂದಿದ್ದು ತಮಗೆ ಇಲ್ಲಿ ವರೆಗೆ ನಿವೇಶನ ಸಿಕ್ಕಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತಾವರಗೇರಾ ರಸ್ತೆಯಲ್ಲಿ ಹಲವಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಎಪಿಎಂಸಿಯ ಚಿಕ್ಕ ಮಳಿಗೆಗಳು ಪಾಳು ಬಿದ್ದಿದ್ದು ವರ್ತಕರಿಗೆ ಬಾಡಿಗೆ ರೂಪದಲ್ಲಿ ಹಂಚಿಕೆ ಮಾಡದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ಸ್ಥಳೀಯರು ದೂರುತ್ತಾರೆ. ತಾವು ಈಚೆಗೆ ಅಧಿಕಾರ ವಹಿಸಿಕೊಂಡಿದ್ದು ಈಗಾಗಲೆ ಮಳಿಗೆಗಳನ್ನು ಪರಿಶೀಲನೆ ಮಾಡಲಾಗಿದೆ, ವಿದ್ಯುತ್ ಸೌಲಭ್ಯ ಕಲ್ಪಿಸಿ ಸರಿ ಪಡಿಸಲಾಗುವುದು ಎಂದು ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಸಾವಿತ್ರಿ ಪಾಟೀಲ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ₹40 ಲಕ್ಷ ಸೆಸ್ ಸಂಗ್ರಹ ಗುರಿ ಹೊಂದಲಾಗಿದ್ದು ಇಲ್ಲಿಯವರೆಗೆ ₹ 29 ಲಕ್ಷ ಸಂಗ್ರಹವಾಗಿದೆ. ಹಣಕಾಸಿನ ಲಭ್ಯತೆ ಅನುಗುಣವಾಗಿ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.–ಸಾವಿತ್ರಿ ಪಾಟೀಲ, ಪ್ರಭಾರ ಕಾರ್ಯದರ್ಶಿ ಎಪಿಎಂಸಿ ಕನಕಗಿರಿ
ನೂತನ ಎಪಿಎಂಸಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಿಸುವ ಮೂಲಕ ಆಡಳಿತ ಸುಗಮವಾಗಿ ಸಾಗಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ರೈತರು ತಾವು ಬೆಳೆದ ಬೆಳೆಗಳನ್ನು ಎಪಿಎಂಸಿ ರಸ್ತೆ ಹಾಗೂ ಕಣದಲ್ಲಿ ಶುಚಿತ್ವಗೊಳಿಸುತ್ತಿದ್ದು ಬೆಳಕು ಹಾಗೂ ವಸತಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.– ಕನಕಪ್ಪ, ರೈತ ಕನಕಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.