ಕನಕಗಿರಿ: ಕಾಲು ಜಾರಿ ತುಂಗಭದ್ರಾ ಎಡದಂಡೆ ಕಾಲುವೆಗೆ ಬಿದ್ದ ಯುವಕ– ತೀವ್ರ ಹುಡುಕಾಟ
ಕನಕಗಿರಿ (ಕೊಪ್ಪಳ ಜಿಲ್ಲೆ): ಮನರೇಗಾ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನೊಬ್ಬ ಕಾಲು ಜಾರಿ ತುಂಗಭದ್ರಾ ಎಡದಂಡೆ ಕಾಲುವೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಘಟನೆ ತಾಲ್ಲೂಕಿನ ಚಿಕ್ಕಡಂಕನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಕ್ಯಾಂಪ್‌ನಲ್ಲಿ ಭಾನುವಾರ ನಡೆದಿದೆ.
ಬಸವೇಶ್ವರ ಕ್ಯಾಂಪ್‌ನ ನಿವಾಸಿ ಹನುಮಂತಪ್ಪ ಆದಾಪುರ ಎಂಬುವವರು ನೀರಲ್ಲಿ ಕೊಚ್ಚಿಹೋದ ಕಾರ್ಮಿಕ.
ಕ್ಯಾಂಪ್‌ನಲ್ಲಿರುವ ನಾಲಾದಲ್ಲಿ ವಾರದಿಂದ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ಅಲ್ಲಿ ಕೆಲಸ ಮಾಡುತ್ತಿರುವ ಹನುಮಂತಪ್ಪ ಪಕ್ಕದಲ್ಲಿಯೇ ಇರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಹೋಗುವಾಗ ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಯುವಕರು ಹನುಮಂತಪ್ಪನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.
ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ತೆಪ್ಪ ಹಾಕಿ ಹುಡುಕುವ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪಿಡಿಒ ಲಕ್ಷ್ಮಣ ತಿಳಿಸಿದ್ದಾರೆ.
ಧೈರ್ಯ ತುಂಬಿದ ತಾಪಂ ಇಒ: ಹನುಮಂತಪ್ಪ ನೀರಿನಲ್ಲಿ ಕೊಚ್ಚಿ ಹೋದ ಘಟನೆಯಿಂದ ದುಃಖದಲ್ಲಿರುವ ಕುಟುಂಬಸ್ಥರಿಗೆ ತಾಲ್ಲೂಕು ಪಂಚಾಯಿತಿ ಪ್ರಚಾರ ಇಒ ಕೆ. ರಾಜಶೇಖರ ಹನುಮಂತಪ್ಪನ ಮನೆಗೆ ತೆರಳಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.