ADVERTISEMENT

ಕಾರಟಗಿ: ಕುಂಬಾರಿಕೆಗೆ ಬೇಕಿದೆ ಸರ್ಕಾರದ ಉತ್ತೇಜನ

ಕೆ.ಮಲ್ಲಿಕಾರ್ಜುನ
Published 25 ಏಪ್ರಿಲ್ 2025, 6:58 IST
Last Updated 25 ಏಪ್ರಿಲ್ 2025, 6:58 IST
ಕಾರಟಗಿಯ ನವಲಿ ರಸ್ತೆಯ ದಲಾಲಿ ಬಜಾರ್‌ ತಿರುವು ಬಳಿ ಗಡಿಗೆ ಮತ್ತಿತರ ಮಣ್ಣಿನ ವಸ್ತುಗಳ ಮಾರಾಟದಲ್ಲಿ ನಿರತರಾಗಿರುವ ಒನ್ನಾಪುರದ ಶರಣಪ್ಪ
ಕಾರಟಗಿಯ ನವಲಿ ರಸ್ತೆಯ ದಲಾಲಿ ಬಜಾರ್‌ ತಿರುವು ಬಳಿ ಗಡಿಗೆ ಮತ್ತಿತರ ಮಣ್ಣಿನ ವಸ್ತುಗಳ ಮಾರಾಟದಲ್ಲಿ ನಿರತರಾಗಿರುವ ಒನ್ನಾಪುರದ ಶರಣಪ್ಪ   

ಕಾರಟಗಿ: ಅಧುನಿಕತೆಯ ಭರಾಟೆಯಿಂದಾಗಿ ಕುಂಬಾರಿಕೆ ವೃತ್ತಿ ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿದೆ. ಕುಲಕಸುಬು ಬಿಡಲು ಮನಸ್ಸಿಲ್ಲದಿದ್ದರೂ ಲಾಭವಿಲ್ಲ ಎಂಬ ಕಾರಣಕ್ಕಾಗಿ ಕುಂಬಾರ ಕುಟುಂಬಗಳು, ಪರ್ಯಾಯ ವೃತ್ತಿಯತ್ತ ವಾಲುತ್ತಿದ್ದಾರೆ. ಆದರೆ ಕುಲಕಸುಬನ್ನು ಬಿಡಲು ಸಾಧ್ಯವಾಗದ ಕುಟುಂಬಗಳು ಮುಂದುವರಿಸಿದ್ದಾರೆ. ಅಂತಹ ಕುಟುಂಬಗಳಿಗೆ ಸರ್ಕಾರದ ಉತ್ತೇಜನ ಬೇಕಿದೆ.

ಕುಂಬಾರ ಸಮುದಾಯಕ್ಕೆ ಸೌಕರ್ಯ, ಸಾಲ, ಅನುದಾನ, ರಿಯಾಯಿತಿಯಂಥಹ ಪ್ರೋತ್ಸಾಹಕರ ಯೋಜನೆಗಳನ್ನು ನೀಡಿ, ನಶಿಸುತ್ತಿರುವ ಕುಂಬಾರಿಕೆಗೆ ಮರುಜೀವ ನೀಡಬೇಕಿದೆ. ತಾಲ್ಲೂಕಿನ ಪನ್ನಾಪುರ, ಬೇವಿನಾಳ ಇತರೆ ಗ್ರಾಮಗಳಲ್ಲಿ ಕುಂಬಾರರ ಕುಟುಂಬಗಳಿವೆ. ಬೆರಳೆಣಿಕೆಯಷ್ಟು ಜನರು ಸಂಕಷ್ಟಗಳ ಮಧ್ಯೆಯೂ ಕಸುಬನ್ನು ಮುಂದುವರಿಸಿದ್ದಾರೆ.

‘ಸರ್ಕಾರ ಪರಂಪರಾಗತ ವೃತ್ತಿಗೆ ಪ್ರೋತ್ಸಾಹ ನೀಡುತ್ತಿಲ್ಲ. ಆಂಧ್ರ, ತೆಲಂಗಾಣದಲ್ಲಿ ಕುಂಬಾರಿಕೆಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಿದ್ದಾರೆ. ನಮ್ಮಲ್ಲಿ ವಿಶ್ವಕರ್ಮ ಯೋಜನೆಯಲ್ಲಿ ವೃತ್ತಿ ಕೌಶಲ ಹೆಚ್ಚಿಸುವ, ಸಾಲಸೌಲಭ್ಯ ಒದಗಿಸಬೇಕು. ಆದರೆ ತರಬೇತಿ, ಅನುದಾನಕ್ಕೆಂದು ಅರ್ಜಿ ಸಲ್ಲಿಸಿ, ವರ್ಷ ಕಳೆದರೂ, ಇಲಾಖೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಇದು ನಿರಾಸೆ ಮೂಡಿಸಿದೆ. ಸಾಕಪ್ಪಾ, ಈ ಕುಂಬಾರಿಕೆ ಎನ್ನುವಂತಾಗಿದೆ’ ಎಂದು ಪನ್ನಾಪುರದ ಕುಂಬಾರ ಶರಣಪ್ಪ.

ADVERTISEMENT

ಸಮಸ್ಯೆ ಹಲವು: ‘ಕುಂಬಾರಿಕೆಗೆ ಮಣ್ಣಿನ ಕೊರತೆಯೇ ಬಹುದೊಡ್ಡ ಸಮಸ್ಯೆಯಾಗಿದೆ. ಹಿಂದೆ ಕಾರಟಗಿಯ ಕೆರೆಯಲ್ಲಿ ಮಣ್ಣು ದೊರೆಯುತ್ತಿತ್ತು. ಈಗ ಆಸ್ಪದವಿಲ್ಲದಾಗಿದೆ. ಸಿಂಧನೂರ ತಾಲ್ಲೂಕಿನ ಮುಕ್ಕುಂದಾ ಕೆರೆಯಿಂದ ಮಣ್ಣು ತರಿಸಲು ಟ್ರ್ಯಾಕ್ಟರ್‌ನ 1 ಟ್ರಿಪ್‌ಗೆ ₹10 ಸಾವಿರವರೆಗೆ ಖರ್ಚಾಗುತ್ತಿದೆ. ಅಲ್ಲೂ ಆಕ್ಷೇಪಗಳು ಕೇಳಿವೆ. ಅದಲ್ಲದೇ ಕಟ್ಟಿಗೆಗೆ ಸಾವಿರಾರು ರೂಪಾಯಿ ವ್ಯಯಿಸಬೇಕು. ಗ್ರಾಹಕರೊಂದಿಗೆ ಚೌಕಾಸಿ ನಡೆಸಿ, ಲಾಭ ಪಡೆದು ಜೀವನ ನಡೆಸಬೇಕಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಾಂಪ್ರದಾಯಕ ಮಡಿಕೆಗೆಳಿಗೆ ಆಧುನಿಕ ಸ್ಪರ್ಷವನ್ನೂ ನೀಡುತ್ತಿದ್ದೇವೆ. ಜತೆಗೆ ಕೃಷಿಯ ಕೆಲಸದಲ್ಲೂ ತೊಡಗುವುದರಿಂದ ಜೀವನ ನಡೆಯುತ್ತಿದೆ’ ಎಂದು ಶರಣಪ್ಪ, ಕಸುಬಿನಲ್ಲಿಯ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಕುಂಬಾರರು ಬರಿ ಮಡಿಕೆಯಷ್ಟೇ ಅಲ್ಲ. ಸಾಂಪ್ರದಾಯಿಕ ಹಬ್ಬಗಳ ಆಚರಣೆಗೆ ಅಗತ್ಯ ವಸ್ತುಗಳನ್ನು ತಯಾರಿಸುತ್ತಾರೆ. ಬೇಸಿಗೆಯಲ್ಲಿ ಗಡಿಗೆ, ಶುಭ ಹಾಗೂ ಅಶುಭ ಕಾರ್ಯಗಳಿಗೆ ಅಗತ್ಯವಿರುವ ಬಿಂದಿಗೆ ಮೊದಲಾದವುಗಳನ್ನು ತಯಾರಿಸುತ್ತಾರೆ. ಅಗತ್ಯವಿರುವವರು ಕುಂಬಾರರ ಮನೆ ಹುಡುಕಿ ತರುತ್ತಾರೆ. ಮಣ್ಣಿನ ಎತ್ತು, ಬಿಂದಿಗೆ, ಕುಂಭದ ಗಡಿಗೆ, ಹಣತೆ ಸಹಿತ ತರಾವರಿ ವಸ್ತುಗಳನ್ನು ಕುಂಬಾರರು ತಯಾರಿಸಲಾಗುತ್ತದೆ. ಮನೆ ಮುಂದೆ ಕುಂಬಾರಿಕೆ ಕೆಲಸ ಮುಗಿಸಿ, ಬಯಲಲ್ಲಿ ಹಾಕಿರುವ ಬಟ್ಟಿಯಲ್ಲಿ ಅವನ್ನು ಸುಟ್ಟು ಗಟ್ಟಿಗೊಳಿಸುವರು.

ನೆತ್ತಿಸುಡುವ ಬಿಸಿಲಿನಲ್ಲಿ ಬಾಯಾರಿಕೆ ತಣಿಸುವುದೆಂದರೆ ಮಣ್ಣಿನ ಗಡಿಗೆ ಮಾತ್ರ. ಅದರಲ್ಲಿಯ ತಣ್ಣನೆ ನೀರು ಕುಡಿದರೆ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಅವುಗಳ ಬಳಕೆಯಿಂದ ಆರೋಗ್ಯ ರಕ್ಷಣೆಯಾಗುತ್ತದೆ

––ಶರಣಪ್ಪ ಉಪನಾಳ ಅಧ್ಯಕ್ಷ ನಿವೃತ್ತ ಸರ್ಕಾರಿ ನೌಕರರ ಸಂಘ

ನಶಿಸುತ್ತಿರುವ ಕುಂಬಾರಿಕೆಯ ಕಸುಬಿಗೆ ಸರ್ಕಾರ ಬಲ ತುಂಬಬೇಕಿದೆ. ನಮ್ಮ ಶ್ರಮವನ್ನರಿತು ಜನರು ಚೌಕಾಸಿ ಮಾಡುವುದನ್ನು ಬಿಡಬೇಕಿದೆ. ಸರ್ಕಾರದ ನೆರವು ಸಿಕ್ಕರೆ ಮಾತ್ರ ಕಸುಬು ಮುಂದುವರಿಸಲು ಸಾಧ್ಯ

–ಕುಂಬಾರ ಶರಣಪ್ಪ ಪನ್ನಾಪುರ ಗಡಿಗೆ ವ್ಯಾಪಾರಿ

ಹೆಚ್ಚಿದ ತಾಪ: ಮಣ್ಣಿನ ಗಡಿಗೆಗಳಿಗೆ ಹೆಚ್ಚಿದ ಬೇಡಿಕೆ

‘ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದ್ದು ಜನರು ತತ್ತರಿಸಿದ್ದಾರೆ. ಕಲ್ಲಂಗಡಿ ತಂಪು ಪಾನೀಯ ಎಳನೀರು ಮೊದಲಾದವುಗಳ ಮೊರೆ ಹೋಗುತ್ತಿದ್ದಾರೆ. ಜತೆಗೆ ನೈಸರ್ಗಿಕ ಸಹಜವಾಗಿ ನೀರನ್ನು ತಂಪುಗೊಳಿಸುವ ಮಡಿಕೆ(ಗಡಿಗೆ)ಗಳಿಗೆ ಬೇಡಿಕೆ ಹೆಚ್ಚಿದೆ. ಬಡವರ ಫ್ರಿಜ್‌ ಎಂದು ಖ್ಯಾತಿ ಪಡೆದಿರುವ ಗಡಿಗೆಗಳನ್ನು ವಿವಿಧ ಮಾದರಿಯಲ್ಲಿ ಆಕರ್ಷಣೀಯವಾಗಿ ತಯಾರಿಸಿದ್ದು ಗ್ರಾಹಕರನ್ನು ಸೆಳೆಯುತ್ತಿವೆ. ಆಕರ್ಷಕ ವಿನ್ಯಾಸದ ಗಡಿಗೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ರಾಜಸ್ಥಾನದಿಂದಲೂ ವಿವಿಧ ವಿನ್ಯಾಸದ ಗಡಿಗೆಗಳನ್ನು ತರಿಸಿಕೊಳ್ಳಲಾಗುತ್ತಿದೆ. ಬೇಸಿಗೆಯಲ್ಲಿ ಗಡಿಗೆಗಳಿಗೆ ಬೇಡಿಕೆ ಹೆಚ್ಚುತ್ತದೆ. ಸಾಮರ್ಥ್ಯದ ಆಧಾರದ ಮೇಲೆ ಬೆಲೆ ನಿಗದಿಪಡಿಸಿದ್ದು 1 ಲೀಟರ್‌ಗೆ ₹ 80 15 ಲೀಟರ್‌ಗೆ ₹300 ಸಹಿತ 35 ಲೀ. ಸಾಮರ್ಥ್ಯದವರೆಗೆ ಸಿದ್ಧಪಡಿಸುವರು ಅದರ ಬೆಲೆ ₹ 500. ಆದರೆ ಜನರು ಚೌಕಾಸಿ ಮಾಡುವುದು ವ್ಯಾಪಾರ ಬಿಡಬಾರದು ಎಂದು ಕಡಿಮೆ ದರಕ್ಕೆ ಮಾರುವುದು ಸಹಜವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.