ADVERTISEMENT

ಕಾರಟಗಿ: ಬೈಕ್‌ ರ‍್ಯಾಲಿಯೊಂದಿಗೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 6:58 IST
Last Updated 26 ಸೆಪ್ಟೆಂಬರ್ 2025, 6:58 IST
ಕಾರಟಗಿಯಲ್ಲಿ ನಾಯಕ ಸಮಾಜದವರು ಬೈಕ್‌ ರ‍್ಯಾಲಿ ನಡೆಸಿ ಮನವಿ ಸಲ್ಲಿಸಿದರು
ಕಾರಟಗಿಯಲ್ಲಿ ನಾಯಕ ಸಮಾಜದವರು ಬೈಕ್‌ ರ‍್ಯಾಲಿ ನಡೆಸಿ ಮನವಿ ಸಲ್ಲಿಸಿದರು   

ಕಾರಟಗಿ: ‘ರಾಜ್ಯದಲ್ಲಿ ಇತರ ಜಾತಿಗಳನ್ನು ಎಸ್‍ಟಿಗೆ ಸೇರಿಸುತ್ತಿರುವುದನ್ನು ವಿರೋಧಿಸಿ, ಅನ್ಯ ಜಾತಿಯವರು ಎಸ್‌ಟಿ ಖೊಟ್ಟಿ ಜಾತಿ ಪ್ರಮಾಣಪತ್ರಗಳನ್ನು ಪಡೆದು ವಂಚನೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿ ನಾಯಕ ಸಮಾಜದವರು ಪಟ್ಟಣದಲ್ಲಿ ಗುರುವಾರ ಬೈಕ್ ರ‍್ಯಾಲಿಯೊಂದಿಗೆ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪಟ್ಟಣದ ಪುರಸಭೆ ಆವರಣದಿಂದ ಆರಂಭಿಸಿದ ಬೈಕ್‌ ರ‍್ಯಾಲಿ ಕನಕದಾಸ ವೃತ್ತ, ರಾಜ್ಯ ಹೆದ್ದಾರಿ, ಹಳೆಯ ಬಸ್‌ ನಿಲ್ದಾಣ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಮುಕ್ತಾಯಗೊಂಡಿತು.

ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಶಿವರೆಡ್ಡಿ ನಾಯಕ ಮಾತನಾಡಿ, ‘ನಾಯಕ ಸಮಾಜಕ್ಕೆ ಸಿಗಬೇಕಾದ ಸವಲತ್ತುಗಳನ್ನು ಅನ್ಯ ಜಾತಿಯವರು ಖೊಟ್ಟಿ ಜಾತಿ ಪ್ರಮಾಣ ಪತ್ರ ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಕ್ಷಣದಿಂದಲೇ ತಡೆಗಟ್ಟಬೇಕು. 2 ಲಕ್ಷಕ್ಕೂ ಅಧಿಕ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗಿದ್ದು, ಇದರ ಬಗ್ಗೆ ವಿಚಾರಣೆ ನಡೆಸಿ, ನಕಲು ಜಾತಿ ಪತ್ರಗಳನ್ನು ರದ್ದುಪಡಿಸಬೇಕು. ಇತ್ತೀಚೆಗೆ ಇತರ ಜಾತಿಯವರನ್ನು ಏಸ್‌ಟಿಗೆ ಸೇರ್ಪಡೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕಡಿವಾಣ ಹಾಕಬೇಕು. ಎಲ್ಲಾ ವಿವಿಗಳಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಸಮಾಜದ ಬೆಳವಣಿಗೆ ಬಗ್ಗೆ ಸಂಶೋಧನಾತ್ಮಕ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಶಿರಸ್ತೇದಾರ ಉಮಾಮಹೇಶ್ವರಗೆ ಸರ್ಕಾರಕ್ಕೆ ಬರೆದ ಮನವಿಯನ್ನು ಸಲ್ಲಿಸಲಾಯಿತು. ಸಮಾಜದ ತಾಲ್ಲೂಕು ಅಧ್ಯಕ್ಷ ಬೂದಿ ಗಿರಿಯಪ್ಪ, ಗೌರವಾಧ್ಯಕ್ಷ ನಾಗನಗೌಡ, ಮಾಜಿ ಅಧ್ಯಕ್ಷ ಸಿ. ಗದ್ದೆಪ್ಪ ನಾಯಕ, ಪ್ರಧಾನ ಕಾರ್ಯದರ್ಶಿ ಸೋಮನಾಥ ಹೆಬ್ಬಡದ, ಪ್ರಮುಖರಾದ ದೇವರಾಜ ಜೂರಟಗಿ, ಹನುಮಂತಪ್ಪ ಮೈಲಾಪುರ, ರಮೇಶ್ ವಕೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.