ಯಲಬುರ್ಗಾ: ಕನ್ನಡ ಭಾಷೆಗೆ ಅಪಮಾನ ಮಾಡಿರುವ ಬಹುಭಾಷಾ ನಟ ಕಮಲ್ ಹಾಸನ್ ಅವರು ಕನ್ನಡಿಗರಲ್ಲಿ ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಕಮಲ್ ಹಾಸನ್ ನಟಿಸುವ ಚಿತ್ರಗಳನ್ನು ನಿರ್ಬಂಧಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಮುಖಂಡರು ಎಚ್ಚರಿಸಿದರು.
ಶುಕ್ರವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಮುಖಂಡರು, ‘ತಮಿಳು ಭಾಷೆಯನ್ನು ಮೇಳೈಸಿ ಕನ್ನಡ ಭಾಷೆಯನ್ನು ಕಡಿಮೆ ಎನ್ನುವ ರೀತಿಯಲ್ಲಿ ಮಾತನಾಡಿದ್ದು, ಸಮಸ್ತ ಕನ್ನಡ ನಾಡಿನ ಜನತೆಗೆ ಮಾಡಿದ ಅನ್ಯಾಯವಾಗಿದೆ. ತಪ್ಪಾಗಿ ಮಾತನಾಡಿದರೂ ಕ್ಷಮೆ ಕೇಳುವಲ್ಲಿ ಉಡಾಫೆ ಮಾತುಗಳನ್ನು ಆಡುವ ಮೂಲಕ ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತರುವ ರೀತಿಯನ್ನು ನಡೆದುಕೊಳ್ಳುತ್ತಿದ್ದಾರೆ. ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಕನ್ನಡ ಭಾಷೆಗೆ ಅವಮಾನಿಸುವುದು ಖಂಡನೀಯ. ಇವರ ವಿರುದ್ಧ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜನಕಲ್ಯಾಣ ವೇದಿಕೆಯ ಮುಖಂಡ ಸ. ಶರಣಪ್ಪ ಪಾಟೀಲ, ತಾಲ್ಲೂಕು ಅಧ್ಯಕ್ಷ ಶಿವಕುಮಾರ ನಾಗನಗೌಡ್ರ ಮಾತನಾಡಿದರು.
ಮುಖಂಡರಾದ ರವಿ ನಿಂಗೋಜಿ, ಕರವೇ ತಾಲ್ಲೂಕು ಉಪಾಧ್ಯಕ್ಷ ರಾಮನಗೌಡ ಪಾಟೀಲ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಭೀಮೇಶ ಬಂಡಿವಡ್ಡರ, ಜಿಲ್ಲಾ ಉಪಾಧ್ಯಕ್ಷ ದುರಗಪ್ಪ ಮಾದರ, ದೇವಪ್ಪ ಬನ್ನಿಕೊಪ್ಪ, ವೀರೇಶ ಬಳಿಗಾರ, ಬಸವಲಿಂಗಪ್ಪ ಮಾಲಗಿತ್ತಿ, ಪವನ ಹಡಗಲಿ, ಬಸವರಾಜ ಹಡಪದ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.