ADVERTISEMENT

ಶಿಕ್ಷಣದ ಹೆಸರಲ್ಲಿ ಕೋಮು ದ್ವೇಷ ಬಿತ್ತುವ ಬಿಜೆಪಿ: ಭಾಸ್ಕರ್

ಗಂಗಾವತಿ: ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಮ್ಮೇಳನದಲ್ಲಿ ಭಾಸ್ಕರ್ ಆರೋಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 12:29 IST
Last Updated 27 ಸೆಪ್ಟೆಂಬರ್ 2022, 12:29 IST
ಗಂಗಾವತಿ ನಗರದ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಮ್ಮೇಳನದಲ್ಲಿ ಆಂಧ್ರಪ್ರದೇಶದ ಪಿಡಿಎಸ್‌ಯು ಸಂಘಟನೆ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಮಾತನಾಡಿದರು
ಗಂಗಾವತಿ ನಗರದ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಮ್ಮೇಳನದಲ್ಲಿ ಆಂಧ್ರಪ್ರದೇಶದ ಪಿಡಿಎಸ್‌ಯು ಸಂಘಟನೆ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಮಾತನಾಡಿದರು   

ಗಂಗಾವತಿ: ‘ಬಿಜೆಪಿ ಸರ್ಕಾರ ಶೈಕ್ಷಣಿಕ ಕ್ಷೇತ್ರದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಜಾತಿ ತಾರತಮ್ಯದ ವಿಷಬೀಜದ ಪಠ್ಯ ರಚಿಸಿ ವಿದ್ಯಾರ್ಥಿಗಳ ನಡುವೆ ಕೋಮುಗಲಭೆ ಸೃಷ್ಟಿಸುತ್ತಿದೆ’ ಎಂದು ಆಂಧ್ರಪ್ರದೇಶದ ಪ್ರಗತಿಪರ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಆರೋಪಿಸಿದರು.

ನಗರದ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮೊದಲ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.

‘ಪ್ರಧಾನಿ ಮೋದಿ ಅವರು 8ವರ್ಷಗಳಿಂದ ಸುಳ್ಳುಗಳನ್ನು ಹೇಳುತ್ತಲೇ ಬರುತ್ತಿದ್ದಾರೆ. ಶಿಕ್ಷಣ ಡಿಜಿಟಲೀಕರಣ, ಸಾವಿರಾರು ಹುದ್ದೆಗಳ ಭರ್ತಿ, ಸ್ವಚ್ಛ ಭಾರತ ಎಂದು ಸುಳ್ಳುಗಳು ಹೇಳುತ್ತಾ ದೇಶದ ಆಸ್ತಿಗಳನ್ನು ಬಂಡವಾಳ ಶಾಹಿಗಳಿಗೆ ಮಾರಾಟಕ್ಕೆ ಇಟ್ಟಿದ್ದಾರೆ’ ಎಂದರು.

ADVERTISEMENT

‘ಯುವಜನತೆ ಉದ್ಯೋಗ ಸೌಲಭ್ಯ ಕಲ್ಪಿಸಲಾಗದೆ, ಪದವಿ ಶಿಕ್ಷಣವನ್ನ ಎನ್ಇಪಿಯಡಿ 4 ವರ್ಷಕ್ಕೆರಿಸಿದ್ದಾರೆ. ಈಚೆಗೆ ನಡೆದ ಪಿಎಸ್ಐ, ಶಿಕ್ಷಕರ ನೇಮಕಾತಿ, ಕೆಪಿಟಿಸಿಎಲ್ ಸೇರಿ ಎಲ್ಲ ಪರೀಕ್ಷೆಗಳಲ್ಲಿ ಆಕ್ರಮ ನಡೆದಿದ್ದು, ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟವಾಡಿದ್ದಾರೆ. ಈವರೆಗೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿಲ್ಲ’ ಎಂದೂ ದೂರಿದರು.

ಕಾಲೇಜುಗಳಲ್ಲಿ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ವಿದ್ಯಾರ್ಥಿವೇತನ, ಮೂಲ ಸೌಲಭ್ಯಗಳನ್ನು ಪಡೆಯಲು ತರಗತಿಗಳು ತೊರೆದು ಪ್ರತಿಭಟನೆ ನಡೆಸಬೇಕಾದ ಸ್ಥಿತಿ ಇಂದಿನ ಸರ್ಕಾರಗಳು ತಂದಿರಿಸಿವೆ. ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರು ಇಲ್ಲದೆ ಗುಣಮಟ್ಟದ ಶಿಕ್ಷಣದ ಕೊರತೆ ಹೆಚ್ಚಾಗಿ ಕಾಡುತ್ತಿದೆ ಎಂದರು.

ಧಾರವಾಡದ ವೈಶಾಲಿ ಮಾತನಾಡಿ, ಸ್ವಾತಂತ್ರ್ಯ ದೊರೆತು ಸುಮಾರು ವರ್ಷಗಳು ಕಳೆದರೂ ಮಹಿಳೆಯರಿಗೆ ಈವರೆಗೆ ಸುರಕ್ಷತೆ ಇಲ್ಲವಾಗಿದೆ. ಯುವತಿರ ಮೇಲೆ ಅತ್ಯಚಾರಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಸರ್ಕಾರ ಈವರೆಗೆ ಯಾವ ಕ್ರಮವು ಜರುಗಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ವಿದ್ಯಾರ್ಥಿ ಸಂಘಟನೆ ಸಮೀಕ್ಷೆ ವರದಿ ಪ್ರಣಾಳಿಕೆ ಮಂಡನೆ, ವಿದ್ಯಾರ್ಥಿಗಳ ಭವಿಷ್ಯ ಮುನ್ನಡೆ ಮಂಡನೆ ಗೋಷ್ಠಿಗಳು ನಡೆದವು.

ಮಹ್ಮದ್ ಸಿರಾಜ್, ಕುಮಾರ್ ಸಮತಲಾ, ಸರೊವಣ್ ಬೆಂಕಿಕೇರೆ, ರಜಾಕ್ ಉಸ್ತಾದ್, ಪೀರ್ ಭಾಷ, ಮಲ್ಲಿಗೆ ಶಿರೆಮನಿ, ಪೂರ್ಣಿಮಾ, ಭಾರದ್ವಾಜ್, ಹೇಮಂತ, ದುರ್ಗೇಶ, ಗುರುಬಸವ, ಶರಣಬಸವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.