ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲು ಪಕ್ಷದ ವರಿಷ್ಠರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಸಂಸದ ಸಂಗಣ್ಣ ಕರಡಿ ಭಾನುವಾರ ಬೆಂಬಲಿಗರ ಹಾಗೂ ಹಿತೈಷಿಗಳ ಸಭೆ ಕರೆದಿದ್ದಾರೆ. ಈ ಸಭೆಯ ಬಳಿಕ ಅವರು ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ಶನಿವಾರ ತಡರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಗಣ್ಣ ಅವರಿಗೆ ಫೋನ್ ಕರೆ ಮಾಡಿ ‘ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಭಾನುವಾರ ಎಲ್ಲವೂ ಪರಿಹಾರವಾಗಲಿದೆ’ ಎಂದಿದ್ದು, ವರಿಷ್ಠರಿಂದ ಏನು ಸಂದೇಶ ಬರಲಿದೆ ಎನ್ನುವುದನ್ನೂ ಸಂಗಣ್ಣ ಎದುರು ನೋಡುತ್ತಿದ್ದಾರೆ.
ಮೊದಲು ಟಿಕೆಟ್ ನೀಡಲಾಗುವುದು ಎಂದು ರಾಜ್ಯ ನಾಯಕರು ನನಗೆ ಭರವಸೆ ಕೊಟ್ಟಿದ್ದರು. ಬೊಮ್ಮಾಯಿ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ನನಗೇ ಟಿಕೆಟ್ ನೀಡುವಂತೆ ಕೇಂದ್ರ ನಾಯಕರಿಗೆ ಶಿಫಾರಸು ಮಾಡಿದ್ದಾರೆ. ಪಕ್ಷದ ಆಂತರಿಕ ಸಮೀಕ್ಷೆಯ ವರದಿ ನನ್ನ ಪರವಾಗಿಯೇ ಬಂದಿದೆ. ಆದ್ದರಿಂದ ನನಗೇ ಟಿಕೆಟ್ ಕೊಡಬೇಕು ಎಂದು ಸಂಗಣ್ಣ ಪಟ್ಟು ಹಿಡಿದಿದ್ದಾರೆ.
ವರಿಷ್ಠರು ’ಹಾಲಿ ಸಂಸದರು ಮತ್ತು ಅವರ ಕುಟುಂಬಕ್ಕೆ ಟಿಕೆಟ್ ನೀಡುವುದಿಲ್ಲ’ ಎಂದು ಹೇಳಿದ್ದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಬಿಜೆಪಿ ತೊರೆದು ಪಕ್ಷೇತರ ಅಥವಾ ಜೆಡಿಎಸ್‌ನಿಂದ ಸ್ಪರ್ಧೆ ಮಾಡಲು ಒಲವು ಹೊಂದಿದ್ದಾರೆ ಎಂದು ಗೊತ್ತಾಗಿದೆ. ಇದೇ ಕಾರಣಕ್ಕಾಗಿ ಜೆಡಿಎಸ್ ಕೊಪ್ಪಳ ಕ್ಷೇತ್ರದ ಟಿಕೆಟ್ ಘೋಷಣೆ ಬಾಕಿ ಉಳಿಸಲಾಗಿದೆ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.
1994ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದ್ದ ಸಂಗಣ್ಣ 1999ರಲ್ಲಿ ಜೆಡಿಯು, 2008ರಲ್ಲಿ ಜನತಾದಳ, 2011ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದರು. 2004 ಮತ್ತು 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತರು. 2014ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸಂಸದರಾಗಿ, 2019ರಲ್ಲಿ ಪುನರಾಯ್ಕೆಯಾದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ರಾಜಕಾರಣದಲ್ಲಿ ಹಿಂದಿನ ಮೂರು ದಶಕಗಳಲ್ಲಿ ನಡೆದ 7 ಚುನಾವಣೆಗಳಲ್ಲಿ ಸಂಗಣ್ಣ 4 ಬಾರಿ ಶಾಸಕರಾದರೆ, ಕಾಂಗ್ರೆಸ್‌ನ ಹಿಟ್ನಾಳ ಕುಟುಂಬದ ಕೆ. ಬಸವರಾಜ ಒಂದು ಸಲ ಮತ್ತು ರಾಘವೇಂದ್ರ ಹಿಟ್ನಾಳ ಎರಡು ಸಲ ಶಾಸಕರಾಗಿದ್ದಾರೆ. ಹೀಗಾಗಿ ಇಲ್ಲಿನ ರಾಜಕಾರಣ ಎರಡು ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ. ಈ ಬಾರಿ ಇನ್ನೊಂದು ಕುಟುಂಬದ ಪಾಲಾಗಲು ಅವಕಾಶ ನೀಡಬಾರದು ಎಂದು ಸಂಗಣ್ಣ ಟಿಕೆಟ್ ತಮಗೇ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇನ್ನೊಬ್ಬ ಟಿಕೆಟ್ ಆಕಾಂಕ್ಷಿಯಾದ ಸಿ.ವಿ. ಚಂದ್ರಶೇಖರ್ ಕೂಡ ತಮ್ಮ ನಿವಾಸದಲ್ಲಿ ಪ್ರತ್ಯೇಕವಾಗಿ ಬೆಂಬಲಿಗರ ಸಭೆ ಕರೆದಿದ್ದಾರೆ. ಹೀಗಾಗಿ ಈ ಇಬ್ಬರೂ ನಾಯಕರ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.