ಕೊಪ್ಪಳ ನಿಲ್ದಾಣದಲ್ಲಿ ಬಸ್ ಇಲ್ಲದೆ ಜನರ ಪರದಾಟ
ಕೊಪ್ಪಳ: ಜಿಲ್ಲಾಕೇಂದ್ರದಲ್ಲಿ ಸೋಮವಾರ (ಇಂದು) ಆಯೋಜನೆಯಾಗಿರುವ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುತ್ತಿರುವ ಕಾರಣ ಫಲಾನುಭವಿಗಳನ್ನು ಹಳ್ಳಿ ಹಳ್ಳಿಗಳಿಂದ ಕರೆತರಲು ಹೋಗಿರುವುದರಿಂದ ಇಲ್ಲಿನ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ ಕೊರತೆಯಿಂದಾಗಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಸಮಾವೇಶಕ್ಕೆ ಕೆ.ಎಸ್.ಆರ್.ಟಿ.ಸಿ. ಕೊಪ್ಪಳ ವಿಭಾಗದ ಬಸ್ ಗಳನ್ನು ಫಲಾನುಭವಿಗಳನ್ನು ಕರೆ ತರಲು ನಿಯೋಜಿಸಲಾಗಿದೆ. ನಗರದ ಬಸ್ ನಿಲ್ದಾಣದಲ್ಲಿ ಮುಂಡರಗಿ, ಹೊಸಪೇಟೆ, ಕುಷ್ಟಗಿ, ಗಂಗಾವತಿ ಸೇರಿದಂತೆ ಅನೇಕ ಕಡೆಗಳಿಗೆ ತೆರಳಲು ಪ್ರಯಾಣಿಕರು ಹಾಗೂ ವಿವಿಧ ಹಳ್ಳಿಗಳಿಂದ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳು ಬಸ್ ಗಳ ಕೊರತೆಯಿಂದ ಪರದಾಡಿದರು.
ಹಡಗಲಿಯಲ್ಲಿರುವ ಮಗಳ ಮನೆಗೆ ಮುಂಡರಗಿ ಇಂದ ಹೋಂಟಿನಿ ರ್ರೀ, ಒಂದು ತಾಸು ಆಗೈತ್ರಿ ಬಸ್ ಬಂದಿದಿಲ್ಲ ರೀ ' ಎಂದು ವೃದ್ಧರೊಬ್ಬರು ಬೇಸರ ವ್ಯಕ್ತಪಡಿಸಿದರು.
ಬಸ್ ಗಳ ಕೊರತೆಯಿಂದ ಬಸ್ ನಿಲ್ದಾಣ ಕೂಡ ಬಣಗುಡುತ್ತಿತ್ತು. ಕಾಲೇಜು ವಿದ್ಯಾರ್ಥಿಗಳ ಬಸ್ ಕೊರತೆಯಿಂದಾಗಿ ಅಸಹಾಯಕರಾಗಿ ನಿಲ್ದಾಣದಲ್ಲಿ ನಿಂತಿದ್ದರು. ಕೆಲವರು ಬಸ್‌ಗಾಗಿ ಕಾದು ಕಾದು ಸುಸ್ತಾಗಿ ಖಾಸಗಿ ವಾಹನದ ಕಡೆ ತೆರಳಿದರೂ ಸಿಗಲಿಲ್ಲ.
ಅಂಗಡಿ ಬಂದ್: ಇಲ್ಲಿನ ಕೇಂದ್ರಿಯ ಬಸ್ ನಿಲ್ದಾಣದ ಎದುರು ಮುಖ್ಯಮಂತ್ರಿ ಅವರು ಕನಕದಾಸ ಮೂರ್ತಿ ಉದ್ಘಾಟನೆ ನೆರವೇರಿಸುವರು. ಅದಕ್ಕಾಗಿ ಸುತ್ತಮುತ್ತಲಿನ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಸದಾ ಜನಿನಿಬಿಡ ಪ್ರದೇಶವಾದ ಬಸ್ ನಿಲ್ದಾಣದ ಎದುರಿನ ಬಿಕೊ ಎನ್ನುತ್ತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.