ADVERTISEMENT

ಕೊಪ್ಪಳ ಜಿಲ್ಲೆಗೆ ಸಿಗುವುದೇ ಹೊಸ ಯೋಜನೆಯ ‘ಗ್ಯಾರಂಟಿ’?

ಶೃಂಗಾರಗೊಂಡ ಬೃಹತ್‌ ವೇದಿಕೆ, ಜಿಲ್ಲಾ ಕೇಂದ್ರಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಖರ್ಗೆ

ಪ್ರಮೋದ ಕುಲಕರ್ಣಿ
Published 6 ಅಕ್ಟೋಬರ್ 2025, 6:46 IST
Last Updated 6 ಅಕ್ಟೋಬರ್ 2025, 6:46 IST
ಕೊಪ್ಪಳದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿರುವ ಕಾರ್ಯಕ್ರಮದ ವೇದಿಕೆ ಸಿದ್ಧಪಡಿಸಿರುವ ನೋಟ
ಕೊಪ್ಪಳದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿರುವ ಕಾರ್ಯಕ್ರಮದ ವೇದಿಕೆ ಸಿದ್ಧಪಡಿಸಿರುವ ನೋಟ   

ಕೊಪ್ಪಳ: ವಿಶಾಲವಾಗಿರುವ ಬೃಹತ್‌ ವೇದಿಕೆ, ವಿದ್ಯುತ್‌ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುವ ಕಾರ್ಯಕ್ರಮದ ಸ್ಥಳ, ಜಿಲ್ಲಾ ಕೇಂದ್ರದಲ್ಲಿ ರಾರಾಜಿಸುತ್ತಿರುವ ರಾಜಕೀಯ ನಾಯಕರ ಫ್ಲೆಕ್ಸ್‌ಗಳು, ರಸ್ತೆಗಳಲ್ಲಿ ಡಾಂಬರೀಕರಣ ಹಾಗೂ ಎಲ್ಲೆಡೆಯೂ ಪೊಲೀಸ್‌ ಸರ್ಪಗಾವಲು.

ಇದು ಕೊಪ್ಪಳದಲ್ಲಿ ಭಾನುವಾರ ಕಂಡುಬಂದ ಚಿತ್ರಣ. ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ಅವರು ಜಿಲ್ಲಾ ಕೇಂದ್ರದ ವೇದಿಕೆ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿರುವ ಕಾರಣ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ. ಇತ್ತೀಚೆಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡಿರುವ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಗಮನವೂ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ವೈಯಕ್ತಿಕ ಕಾರಣದಿಂದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಪಕ್ಷದ ನಾಯಕರು ಖಚಿತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅನೇಕ ಸಚಿವರು, ಶಾಸಕರು ಸೋಮವಾರ ಇಲ್ಲಿನ ಹೊಸಪೇಟೆ ರಸ್ತೆಯಲ್ಲಿರುವ ಅಗಡಿ ಲೇ ಔಟ್‌ನಲ್ಲಿ ನಡೆಯುವ ಜಿಲ್ಲೆಯ ₹2000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ADVERTISEMENT

ಸಿಗುವುದೇ ಹೊಸ ಗ್ಯಾರಂಟಿ: ಮುಖ್ಯಮಂತ್ರಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್‌ನ ಜನಪ್ರತಿನಿಧಿಗಳು ಭವ್ಯ ವೇದಿಕೆಯಲ್ಲಿ ಅಂದಾಜು ಒಂದು ಲಕ್ಷ ಜನ ಫಲಾನುಭವಿಗಳ ಎದುರು ನಡೆಯಲಿರುವ ದೊಡ್ಡಮಟ್ಟದ ಕಾರ್ಯಕ್ರಮದಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸುವ ಮಹದಾಸೆ ಹೊಂದಿದ್ದಾರೆ. ಜಿಲ್ಲಾಕೇಂದ್ರದಲ್ಲಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜಿಲ್ಲೆಗೆ ಹೊಸ ಯೋಜನೆಯ ಘೋಷಣೆ ‘ಗ್ಯಾರಂಟಿ’ ನೀಡಬಹುದು ಎನ್ನುವ ನಿರೀಕ್ಷೆಯೂ ಜನರಲ್ಲಿದೆ.

ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಸಾಕಷ್ಟು ನೀರಾವರಿ ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದರೂ ಪೂರ್ಣಗೊಂಡಿಲ್ಲ. ಅವುಗಳಿಗೆ ವೇಗ ನೀಡಬೇಕು ಎನ್ನುವುದು ಇಲ್ಲಿನ ಜನರ ಮತ್ತು ಹೋರಾಟಗಾರರ ಆಗ್ರಹವಾಗಿದೆ. ಕೊಪ್ಪಳದಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ಜನರ ಹಕ್ಕೊತ್ತಾಯವಾಗಿದ್ದು, ಈ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿವೆ. ಮುಖ್ಯಮಂತ್ರಿ ಪಾಲ್ಗೊಳ್ಳುತ್ತಿರುವುದು ಇದು ಸರ್ಕಾರಿ ಕಾರ್ಯಕ್ರಮವಾದರೂ ಯಶಸ್ಸಿಗಾಗಿ ಜಿಲ್ಲೆಯ ಅಧಿಕಾರಿಗಳ ಜೊತೆಗೆ ಪಕ್ಷದ ನಾಯಕರು ಕೂಡ ಹೆಗಲು ಜೋಡಿಸಿದ್ದಾರೆ. ಮುಖ್ಯಮಂತ್ರಿ ಜಿಲ್ಲೆಗೆ ಹೊಸ ಉಡುಗೊರೆ ನೀಡಬಹುದೇ ಎನ್ನುವ ನಿರೀಕ್ಷೆ ಹೊತ್ತು ಜನ ಕುತೂಹಲದಿಂದ ಕಾಯುತ್ತಿದ್ದಾರೆ.

ಕೊಪ್ಪಳದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿರುವ ಕಾರ್ಯಕ್ರಮದ ವೇದಿಕೆ ಸಿದ್ಧಪಡಿಸಿರುವ ನೋಟ
ಕೊಪ್ಪಳದ ಕೇಂದ್ರಿಯ ಬಸ್‌ ನಿಲ್ದಾಣದ ಎದುರು ಉದ್ಘಾಟನೆಗೆ ಸಿದ್ಧವಾಗಿರುವ ಕನಕದಾಸ ಮೂರ್ತಿ

ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಬೆಳಿಗ್ಗೆ 11.40ರ ಸುಮಾರಿಗೆ ತಾಲ್ಲೂಕಿನ ಗಿಣಿಗೇರಾ ಏರ್‌ಸ್ಟ್ರೀಪ್‌ಗೆ ಬರಲಿದ್ದು ಮೊದಲು ಮಧ್ಯಾಹ್ನ 12 ಗಂಟೆಗೆ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್)ಯಲ್ಲಿ 450 ಹಾಸಿಗೆ ಸಾಮರ್ಥ್ಯದ ಬೋಧಕ ಆಸ್ಪತ್ರೆಯ ನೂತನ ಕಟ್ಟಡ ಧರ್ಮಶಾಲಾ ಕಟ್ಟಡದ ಉದ್ಘಾಟನಾ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಶಂಕುಸ್ಥಾಪನೆ ನೆರವೇರಿಸುವರು.

ಮಧ್ಯಾಹ್ನ 12.30ಕ್ಕೆ ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಭಕ್ತ ಕನಕದಾಸರ ಪುತ್ಥಳಿ ಅನಾವರಣ ಮಾಡುವರು. ಬಳಿಕ ಭಾಗ್ಯನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ನೆರವೇರಿಸಿ ಮಧ್ಯಾಹ್ನ 1 ಗಂಟೆಗೆ ನಗರದ ಹೊಸಪೇಟೆ ರಸ್ತೆಯಲ್ಲಿರುವ ಅಗಡಿ ಬಡಾವಣೆಯಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿರುವ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್‌ ತೆರಳುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.