ADVERTISEMENT

ಕೊಪ್ಪಳಕ್ಕೆ ಅ.6ರಂದು ಸಿಎಂ ಸಿದ್ದರಾಮಯ್ಯ: ಉದ್ಘಾಟನೆ, ಶಂಕುಸ್ಥಾಪನೆಗಳ ಮಹಾಪೂರ

ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು, ಜಿಲ್ಲಾಕೇಂದ್ರದಲ್ಲಿ ರಾರಾಜಿಸುತ್ತಿರುವ ಬ್ಯಾನರ್‌, ಫ್ಲೆಕ್ಸ್‌ಗಳು

ಪ್ರಮೋದ ಕುಲಕರ್ಣಿ
Published 5 ಅಕ್ಟೋಬರ್ 2025, 2:50 IST
Last Updated 5 ಅಕ್ಟೋಬರ್ 2025, 2:50 IST
ಬಂದೋಬಸ್ತ್‌ ಕಾರ್ಯಕ್ರಮಕ್ಕೆ ನಿಯೋಜನೆಯಾಗಿರುವ ಪೊಲೀಸ್‌ ಸಿಬ್ಬಂದಿ  
ಬಂದೋಬಸ್ತ್‌ ಕಾರ್ಯಕ್ರಮಕ್ಕೆ ನಿಯೋಜನೆಯಾಗಿರುವ ಪೊಲೀಸ್‌ ಸಿಬ್ಬಂದಿ     

ಕೊಪ್ಪಳ: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಬರೋಬ್ಬರಿ ಎರಡು ವರ್ಷ ನಾಲ್ಕು ತಿಂಗಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಜಿಲ್ಲಾಕೇಂದ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಬರುತ್ತಿದ್ದು, ಕಾರ್ಯಕರ್ತರಲ್ಲಿ ಹುಮ್ಮಸ್ಸು ಮನೆ ಮಾಡಿದೆ.

ಇಲ್ಲಿನ ಹೊಸಪೇಟೆ ರಸ್ತೆಯಲ್ಲಿರುವ ಅಗಡಿ ಬಡಾವಣೆಯಲ್ಲಿ ಸೋಮವಾರ ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಕಾರ್ಯಕ್ರಮಕ್ಕೆ ಬೃಹತ್‌ ವೇದಿಕೆ ಸಿದ್ಧಪಡಿಸಲಾಗಿದ್ದು, ಇದು ಸರ್ಕಾರಿ ಕಾರ್ಯಕ್ರಮವಾಗಿದೆ.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಂದ ಕನಿಷ್ಠ ಒಂದು ಲಕ್ಷ ಜನರನ್ನು ಕರೆತರಬೇಕು ಎನ್ನುವ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ ಪಕ್ಷದ ಕಾರ್ಯಕ್ರಮವೆಂಬಂತೆ ಕಾರ್ಯಕರ್ತರು, ಮುಖಂಡರು ಸಂಭ್ರಮಿಸುತ್ತಿದ್ದಾರೆ. ಜಿಲ್ಲಾಕೇಂದ್ರದಲ್ಲಿ ಎಲ್ಲೆಂದರಲ್ಲಿ ಬ್ಯಾನರ್‌ಗಳು ಮತ್ತು ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಇತ್ತೀಚೆಗಷ್ಟೇ ಚಿಕಿತ್ಸೆಗೆ ಒಳಗಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎನ್ನುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಖಚಿತಪಡಿಸಿದ್ದಾರೆ.

ADVERTISEMENT

ಹಿಂದಿನ ಎರಡು ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಬಂದಿದ್ದಾರೆ. ಬೇರೆ ಜಿಲ್ಲೆಗಳಿಗೆ ಪ್ರವಾಸಕ್ಕೆ ತೆರಳುವಾಗಿ ತಾಲ್ಲೂಕಿನ ಗಿಣಿಗೇರಿ ಬಳಿ ಇರುವ ಬಸಾಪುರ ಏರ್‌ಸ್ಟ್ರಿಪ್ಟ್‌ಗೆ ಹಲವು ಬಾರಿ ಬಂದಿದ್ದರು. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಕಿತ್ತುಹೋದಾಗ ಮತ್ತು ಅದನ್ನು ಅಳವಡಿಸಿದ ಬಳಿಕ ಸಾಧಕರಿಗೆ ಸನ್ಮಾನಿಸಲು ಹೀಗೆ ಅನೇಕ ಬಾರಿ ಬಂದಿದ್ದಾರೆ. ಆದರೆ ಜಿಲ್ಲಾಕೇಂದ್ರದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿರುವುದು ಈಗಿನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಯಾಗಿದೆ.

ಹಿಂದೆ ಎರಡು ಬಾರಿ ಸರ್ಕಾರದ ಈ ಕಾರ್ಯಕ್ರಮ ವಿವಿಧ ಕಾರಣಗಳಿಂದ ಮುಂದೂಡಲಾಗಿತ್ತು. ಈಗ ಮುಖ್ಯಮಂತ್ರಿ ಹಾಗೂ ಇತರರ ಸ್ವಾಗತಕ್ಕೆ ಜಿಲ್ಲಾಡಳಿತ, ಜಿಲ್ಲೆಯ ಸಚಿವರು, ಶಾಸಕರು ಸಂಭ್ರಮದಿದ್ದಾರೆ. ಆಡಳಿತಾರೂಢ ಜನಪ್ರತಿನಿಧಿಗಳು ಜಿಲ್ಲೆಯ ಹಿರಿಯ ಅಧಿಕಾರಿಗಳ ಜೊತೆ ಸರಣಿ ಸಭೆಗಳನ್ನು ನಡೆಸಿದ್ದರೆ, ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ನಿರಂತರ ಸಭೆಗಳನ್ನು ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಸಭೆಗಳನ್ನು ನಡೆಸಿ ಸರ್ಕಾರಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಹೆಚ್ಚು ಜನ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡುತ್ತಿದ್ದಾರೆ.

ಕೊಪ್ಪಳದಲ್ಲಿ ಸೋಮವಾರ ನಡೆಯಲಿರುವ ಕಾರ್ಯಕ್ರಮದ ಸ್ಥಳವನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್‌ ನೇಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಹಾಗೂ ಇತರರು ಇದ್ದರು 
ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸೇರಿದಂತೆ ಅನೇಕರ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕನಿಷ್ಠ ಒಂದು ಲಕ್ಷ ಜನ ಬರುವ ನಿರೀಕ್ಷೆಯಿದೆ.
– ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ

₹2000 ಕೋಟಿ ಮೊತ್ತದ ಕಾಮಗಾರಿಗಳು

ಕೊಪ್ಪಳ: ಮುಖ್ಯಮಂತ್ರಿ ಜಿಲ್ಲಾಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಒಟ್ಟು ₹2000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡುವರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ 34 ವಸತಿ ನಿಲಯಗಳ ಹಾಗೂ 2025-26ನೇ ಸಾಲಿನ 41 ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ವಸತಿ ನಿಲಯಗಳ ಶಂಕುಸ್ಥಾಪನೆ ಜಿಟಿಟಿಸಿ ಬಹು ಕೌಶಲ್ಯಾಭಿವೃದ್ಧಿ ಕೇಂದ್ರ ತೋಟಗಾರಿಕಾ ತಂತ್ರಜ್ಞಾನ ಪಾರ್ಕ್‌ ಅಕ್ಕ ಕೆಫೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಈ ಪಟ್ಟಿಯಲ್ಲಿವೆ. ಶನಿವಾರ ಸಚಿವ ತಂಗಡಗಿ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದರು. 

ಸಮಸ್ಯೆಗಳಿಗೆ ಸಿಗುವುದೇ ಮುಕ್ತಿ?

ಕೊಪ್ಪಳ: ಮುಖ್ಯಮಂತ್ರಿ ಸ್ವಾಗತ ಮತ್ತು ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ ಇನ್ನೊಂದೆಡೆ ಹೋರಾಟಗಾರರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಸಿದ್ಧರಾಗಿದ್ದಾರೆ.

ಜಿಲ್ಲಾಕೇಂದ್ರದ ಸುತ್ತಮುತ್ತಲು ವಿವಿಧ ಕಂಪನಿಗಳು ತಮ್ಮ ಕಾರ್ಖಾನೆಗಳನ್ನು ವಿಸ್ತರಣೆ ಮಾಡಲು ಮುಂದಾಗಿದ್ದನ್ನು ವಿರೋಧಿಸುತ್ತಿರುವ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಗಳ ಜಂಟಿ ಕ್ರಿಯಾ ವೇದಿಕೆ ಈ ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸುವಂತೆ ಸರ್ಕಾರಕ್ಕೆ  ಒತ್ತಾಯಿಸುತ್ತಿದೆ. ಇದೇ ವಿಷಯಕ್ಕೆ ಸಂಘಟನೆಯು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ನಿರ್ಧರಿಸಿದೆ. ಬಾಕಿ ಉಳಿದ ವಿವಿಧ ಉಳಿದ ನೀರಾವರಿ ಯೋಜನೆಗಳು ಮತ್ತು ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಬೇಡಿಕೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.