ADVERTISEMENT

ಕೊಪ್ಪಳದಲ್ಲಿ ಜಿಲ್ಲಾ ಬೋಧಕ ಆಸ್ಪತ್ರೆ ಉದ್ಘಾಟನೆ ಶೀಘ್ರ: ಸಿದ್ದರಾಮಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 6:32 IST
Last Updated 7 ಸೆಪ್ಟೆಂಬರ್ 2025, 6:32 IST
ಕೊಪ್ಪಳ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದರು
ಕೊಪ್ಪಳ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದರು   

ಕೊಪ್ಪಳ: ನಗರದಲ್ಲಿ ನಿರ್ಮಾಣಗೊಂಡಿರುವ 450 ಹಾಸಿಗೆಗಳ ಜಿಲ್ಲಾ ಬೋಧಕ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಇತರೆ ಅಭಿವೃದ್ಧಿ ಕೆಲಸಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಈ ತಿಂಗಳಲ್ಲಿ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಆಲಮಟ್ಟಿಗೆ ತೆರಳುವ ಮೊದಲು ಬಸಾಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಸರ್ಕಾರ ಜನಪರವಾಗಿ ಕಾರ್ಯನಿರ್ವಹಿಸುತ್ತಿದೆ. ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಲಾಗಿದ್ದು ಜನರಿಗೆ ನೀಡಿದ ಭರವಸೆಯಂತೆ ಸರ್ಕಾರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ’ ಎಂದರು.

ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾಹನ ತೀರಾ ಹಳೆಯದಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಶೀಘ್ರದಲ್ಲಿ ಹೊಸ ವಾಹನ ಒದಗಿಸುವ ಭರವಸೆ ನೀಡಿದರು.

ADVERTISEMENT

ಈ ಸಂದರ್ಭದಲ್ಲಿ ಇದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿ, ‘ತುಂಗಭದ್ರಾ ಜಲಾಶಯದ ಸಾಧಕ ಬಾಧಕಗಳು ಏನೇ ಇದ್ದರೂ ಎರಡೂ ರಾಜ್ಯಗಳಿಗೆ ಸಂಬಂಧಿಸಿರುತ್ತವೆ. ಇಂಥ ವಿಷಯಗಳ ಕುರಿತು ಚರ್ಚಿಸಲು ಸಮಯದ ನಿಗದಿಪಡಿಸುವಂತೆ ಆಂಧ್ರದ ಮುಖ್ಯಮಂತ್ರಿಯನ್ನು ಕೇಳಲಾಗಿದೆ. ಆ ಸಂದರ್ಭದಲ್ಲಿಯೇ ನವಲಿ ಸಮನಾಂತರ ಜಲಾಶಯ ಮತ್ತು ಜಲಾಶಯ, ನೀರಾವರಿ ವಿಚಾರಗಳಿಗೆ ಸಂಬಂಧಿಸಿದ ಇತರೆ ವಿಷಯಗಳನ್ನೂ ಪ್ರಸ್ತಾಪಿಸಲಾಗುತ್ತದೆ’ ಎಂದರು. ಕ್ರಸ್ಟ್ ಗೇಟ್‌ಗಳ ದುರಸ್ತಿ ವಿಚಾರದಲ್ಲಿ ಸರ್ಕಾರ ಮುತುವರ್ಜಿ ವಹಿಸಿದ್ದು ಅದಕ್ಕೆ ಅಗತ್ಯವಾಗಿರುವ ಸಾರ್ವಜನಿಕರ ಸಹಕಾರವನ್ನೂ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಹೊಸಪೇಟೆ ಶಾಸಕ ಎಚ್.ಆರ್ ಗವಿಯಪ್ಪ, ಮಾಜಿ ಸಂಸದರಾದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್‌ ವರಿಷ್ಠ ಡಾ.ರಾಮ್.ಎಲ್‌.ಅರಸಿದ್ಧಿ ಇತರರು ಇದ್ದರು.

‘ಗವಿಶ್ರೀ ನನಗೆ ಬಿಟ್ಟ ವಿಚಾರ’

‘ಬಲ್ಡೋಟಾ ವಿಚಾರವಾಗಿ ಕೊಪ್ಪಳದಲ್ಲಿ ಸಾರ್ವಜನಿಕ ಸಭೆ ಮಾಡುತ್ತೇನೆ ಎಂದು ನಾನು ಹೇಳಿಲ್ಲ. ಕಾರ್ಖಾನೆಯಿಂದ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ ಎಂದೂ ಸದನಕ್ಕೆ ತಿಳಿಸಿಲ್ಲ. ಗವಿಸಿದ್ದೇಶ್ವರ ಶ್ರೀ ಅವರನ್ನು ಭೇಟಿ ಮಾಡುತ್ತೇನೆ ಎಂದಷ್ಟೇ ಹೇಳಿದ್ದೆ. ಅದು ಗವಿಶ್ರೀ ಅವರಿಗೆ ಮತ್ತು ನನಗೆ ಬಿಟ್ಟ ವಿಚಾರ’ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.