ಕೊಪ್ಪಳ: ವಿವಿಧ ಸವಲತ್ತುಗಳನ್ನು ನೀಡುವ ಕಾರ್ಯಕ್ರಮದಲ್ಲಿ ಫಲಾನುಭವಿಗಳಾಗಿ ಬಂದಿದ್ದ ಸಾವಿರಾರು ಸಂಖ್ಯೆಯ ಜನರಿಗೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಊಟಕ್ಕಾಗಿ ಪರದಾಡಬೇಕಾಯಿತು.
ಬರುವ ಜನರ ಊಟ ಒದಗಿಸುವ ಹೊಣೆಯನ್ನು ಆಹಾರ ಇಲಾಖೆಗೆ ವಹಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದು ಮೊದಲೇ ನಿಶ್ಚಿತವಾಗಿದ್ದರಿಂದ ಎಲ್ಲಿಯೂ ಗೊಂದಲಗಳಾಗದ್ದಂತೆ ಎಚ್ಚರಿಕೆ ವಹಿಸಲು ಊಟದ ಕೌಂಟರ್‌ಗಳನ್ನು ಕೂಡ ಹೆಚ್ಚು ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮೊದಲೇ ಸೂಚನೆ ನೀಡಿದ್ದರು. ಹಲವು ಸರಣಿ ಸಭೆಗಳನ್ನೂ ಮಾಡಿದರು.
ಆದರೂ ಕಾರ್ಯಕ್ರಮಕ್ಕೆ ಸೇರಿದ್ದ ಜನರಿಗೆ ತಕ್ಕಷ್ಟು ಊಟದ ಕೌಂಟರ್‌ಗಳು ಇಲ್ಲದ ಕಾರಣ ಜನ ಪರದಾಡುವಂತಾಯಿತು. ಇನ್ನೂ ಕೆಲವರು ಊಟ ಮಾಡಿ ಬೀಸಾಡಿದ ಎಲೆಗಳ ಪಕ್ಕದಲ್ಲಿಯೇ ನಿಂತು ಹಾಗೂ ಕುಳಿತುಕೊಂಡು ಊಟ ಮಾಡಬೇಕಾಯಿತು. ಕೆಲ ಮಾಧ್ಯಮದವರು ಇವುಗಳ ಛಾಯಾಚಿತ್ರಗಳನ್ನು ತೆಗೆದುಕೊಂಡು ಬರಲು ಹೋದಾಗ ಪೊಲೀಸರಿಂದ ’ಬಿಸಿ’ ಎದುರಿಸಬೇಕಾಯಿತು. ಪೊಲೀಸರು ಕೂಡ ಜನರನ್ನು ನಿಯಂತ್ರಿಸುವ ಜೊತೆಗೆ ತಮ್ಮ ತಾಳ್ಮೆ ಕಳೆದುಕೊಂಡು ಮಾಧ್ಯಮದವರ ಜೊತೆ ಜಟಾಪಟಿ ನಡೆಸಿದರು. ಹೊರಜಿಲ್ಲೆಗಳಿಂದ ಬಂದಿದ್ದ ಪೊಲೀಸ್ ಮಾತನಾಡಿ ’ಊಟದ ಕೌಂಟರ್‌ಗಳನ್ನು ಹೆಚ್ಚಿಸುವಂತೆ ಮೊದಲೇ ಹೇಳಿದ್ದರೂ ಕೇಳಲಿಲ್ಲ; ಹೀಗಾಗಿ ಸಮಸ್ಯೆಯಾಗಿದೆ’ ಎಂದು ಬೇಸರ ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.