
ಕೊಪ್ಪಳ: ಸಂಕ್ರಾಂತಿ ಅಂಗವಾಗಿ ಎಲ್ಲೆಡೆ ಸಂಭ್ರಮ ಮನೆಮಾಡಿತ್ತು. ಜಿಲ್ಲಾಕೇಂದ್ರದ ಗವಿಮಠದ ಆವರಣದಲ್ಲಿ ಜಾತ್ರೆಯ ಸೊಬಗು ಕಣ್ತುಂಬಿಕೊಳ್ಳಲು ಜನ ಬಂದಿದ್ದರು. ಆದರೆ ಇದೆಲ್ಲವನ್ನೂ ಬದಿಗೊತ್ತಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಮುಖಂಡರು ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದ ಚಿತ್ರಣ ಗುರುವಾರ ಕಂಡುಬಂದಿತು.
77 ದಿನದ ಧರಣಿಯಲ್ಲಿ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ‘ನಗರದ ಬಸವೇಶ್ವರ ವೃತ್ತದಲ್ಲಿ ಬರುವ ಕಾರ್ಖಾನೆ ವಿರೋಧಿ ಪರಿಸರ ಜಾಗೃತಿ ನಡೆಸಲು ಶನಿವಾರ ಹಾಗೂ ಭಾನುವಾರ ಬಿಳಿವಸ್ತ್ರದ ಮೇಲೆ ಸಹಿ ಸಂಗ್ರಹ ಆಂದೋಲನ ನಡೆಸಲಾಗುವುದು’ ಎಂದು ತಿಳಿಸಿದರು.
ಕುಣಿಕೇರಿ ಗ್ರಾಮದ ರಮೇಶ ಡಂಬ್ರಳ್ಳಿ ಮಾತನಾಡಿ ‘ನಾನು ಈ ಹಿಂದೆ ನೋಡಿದ ನಮ್ಮ ಗ್ರಾಮದ ಸೊಬಗು ಈಗ ಉಳಿದಿಲ್ಲ. ನನ್ನ ಎಲೆಬಳ್ಳಿ ತೋಟ ಕೈಯಾರೆ ಕಿತ್ತು ಹಾಕಿದ್ದೇನೆ. ಈಗ ಕಾರ್ಖಾನೆ ಕಪ್ಪುದೂಳು, ಹಾರು ಬೂದಿ, ಹೊಗೆ ಆವರಿಸಿ ಏನೂ ಬಿತ್ತಿ ಬೆಳೆಯಲು ಆಗದೆ ಸಂಕಷ್ಟ ಎದುರಿಸುತ್ತಿದ್ದೇವೆ’ ಎಂದರು.
ಕುಣಿಕೇರಿ ಗ್ರಾಮದ ರೈತರಾದ ಗವಿಸಿದ್ದಪ್ಪ ಹಲಿಗಿ, ಉಮೇಶ ಗಣಪ, ನಾಗರಾಜ ದೊಡ್ಡಮನಿ, ಮುದ್ದುರಂಗಪ್ಪ ಸಾದರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.