ಕುಷ್ಟಗಿ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ರಸ್ತೆಗಳ ಅಭಿವೃದ್ಧಿ ಕೈಗೊಂಡಿರುವ ಪುರಸಭೆಯು ಪ್ರಭಾವಿಗಳ ಒತ್ತಡಕ್ಕೆ ಮಣಿದು ರಸ್ತೆ ಒತ್ತುವರಿ ತೆರವುಗೊಳಿಸಲು ಹಿಂದೇಟು ಹಾಕುತ್ತಿದೆ.
ಕಳೆದ ಎರಡು ವರ್ಷಗಳ ಅವಧಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಸರ್ಕಾರದ ನಗರೋತ್ಥಾನ ಯೋಜನೆಯಲ್ಲಿ ಪಟ್ಟಣದ ಎಲ್ಲ 23 ವಾರ್ಡ್‌ಗಳಲ್ಲಿ ಕಾಂಕ್ರೀಟ್ ಮತ್ತು ಡಾಂಬರ್ ರಸ್ತೆ, ಚರಂಡಿ, ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಬಹುತೇಕ ವಾರ್ಡ್‌ಗಳಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಇನ್ನೂ ಕೆಲವು ವಾರ್ಡ್‌ಗಳಲ್ಲಿ ಮಾತ್ರ ಚಾಲನೆ ದೊರೆತಿಲ್ಲ.
ತಾರತಮ್ಯ ನೀತಿ: ಅಭಿವೃದ್ಧಿ ಕೆಲಸಗಳು ಅರಂಭಗೊಂಡಿದ್ದರೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಪ್ರಭಾವಿಗಳು, ಪ್ರಮುಖ ರಾಜಕಾರಣಿಗಳು ವಾಸಿಸುವ ಪ್ರದೇಶಗಳಲ್ಲಿ ಮಾತ್ರ ರಸ್ತೆ, ಚರಂಡಿ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬಹುತೇಕ ಸಾಮಾನ್ಯ ಜನರು ವಾಸಿಸುವ ಸ್ಥಳಗಳನ್ನು ರಸ್ತೆ ಅಭಿವೃದ್ಧಿಗೆ ಆಯ್ಕೆ ಮಾಡಿಕೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ತೆರವು ಏಕಿಲ್ಲ?: ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ನಡೆಸುತ್ತಿರುವುದೇನೊ ಸರಿ. ಆದರೆ ಒತ್ತುವರಿಯಾಗಿ ಉಳಿದೆಷ್ಟೇ ರಸ್ತೆಯಲ್ಲಿ ಕೆಲಸ ನಡೆಸುವುದು ಎಷ್ಟು ಸರಿ? ಎಂಬ ಪ್ರಶ್ನೆ ಸಾರ್ವಜನಿಕರದ್ದು. ನಗರ ಗ್ರಾಮಾಂತರ ಯೋಜನೆ ನಿಯಮಗಳ ಪ್ರಕಾರ ರಸ್ತೆ 30 ಅಡಿ ಅಗಲ ಇದೆ. ಆದರೆ ಬಹುತೇಕ ಕಡೆಗಳಲ್ಲಿ ಅಂಗಡಿ, ಮನೆಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಟೆಂಡರ್ ಪಡೆದಿರುವ ಗುತ್ತಿಗೆದಾರ 30 ಅಡಿ ರಸ್ತೆಯಲ್ಲಿ ಅಭಿವೃದ್ಧಿ ಕೆಲಸ ನಡೆಸಬೇಕು. ಆದರೆ ರಸ್ತೆಯ ಜಾಗ ಮಾಯವಾಗಿದ್ದು ಉಳಿದಷ್ಟೇ ಜಾಗದಲ್ಲಿ ಕೆಲಸ ನಡೆಸುವಂತಾಗಿದೆ.
ರಸ್ತೆ, ಪಾದಚಾರಿ ದಾರಿ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿರುವ ಕಟ್ಟಡ ತೆರವುಗೊಳಿಸಲು ಪುರಸಭೆ ಅಧಿಕಾರಿಗಳಿಗೆ ಇರುವ ಅಡ್ಡಿಯಾದರೂ ಏನು ಎಂದು ಸಾರ್ವಜನಿಕರಾದ ಬಸವರಾಜ ಪಾಟೀಲ, ಕೆ.ವೀರೇಶ ಇತರರು ಪ್ರಶ್ನಿಸಿದರು. ಜನಸಾಮಾನ್ಯರಿಂದ ಆಗಿರುವ ಒತ್ತುವರಿ ತೆರವಿಗೆ ಮುತುವರ್ಜಿ ವಹಿಸುವ ಪುರಸಭೆಯವರು ಪ್ರಭಾವಿಗಳಿಂದ ಆಗಿರುವ ಒತ್ತುವರಿ ತೆರವಿಗೆ ಮೀನಮೇಷ ಏಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಆರೋಪ ಸಂಬಂಧ ಮಾಹಿತಿಗಾಗಿ ಹಲವು ಬಾರಿ ಸಂಪರ್ಕಿಸಿದರೆ ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟಿ ದೂರವಾಣಿ ಕರೆ ಸ್ವೀಕರಿಸಲಿಲ್ಲ.
ರಸ್ತೆ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳ್ಳುವವರೆಗೂ ಕೆಲಸ ಆರಂಭಿಸುವುದಿಲ್ಲ. ಈ ವಿಷಯದಲ್ಲಿ ಮುಲಾಜಿಲ್ಲದೆ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ.-ಮಹಾಂತೇಶ ಕಲಭಾವಿ ಪುರಸಭೆ ಅಧ್ಯಕ್ಷ
ಒತ್ತುವರಿ ತೆರವುಗೊಳಿಸಿದ ನಂತರವಷ್ಟೇ ಕೆಲಸ ನಡೆಸಲು ಪುರಸಭೆ ಅಧಿಕಾರಿಗಳಿಗೆ ಜಿಲ್ಲಾಡಳಿತ ತಾಕೀತು ಮಾಡಬೇಕಿದೆ.-ದೇವಪ್ಪ ನಿವಾಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.