ಕೊಪ್ಪಳ: ತಾಲ್ಲೂಕಿನ ಮುದ್ದಾಬಳ್ಳಿ ಹತ್ತಿರ ಯುಕೆಇಎಂ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಗೊಂಡಬಾಳ ಗ್ರಾಮ ಪಂಚಾಯಿತಿಯಿಂದ ಎನ್‍ಒಸಿ ನೀಡದಂತೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ನೇತೃತ್ವದ ಸಭೆಯಲ್ಲಿ ನಿರ್ಣಯಿಸಲಾಯಿತು.
ಕಳೆದ ಮೂರು ವರ್ಷಗಳಿಂದಲೂ ಗೊಂಡಬಾಳ ಮತ್ತು ಮುದ್ದಾಬಳ್ಳಿ ಗ್ರಾಮದ ಜನರಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೊಳ್ಳಲು ಸಿದ್ದತೆ ನಡೆದಿದೆ. ಇದರಿಂದ ಪರಿಸರಕ್ಕೆ ಧಕ್ಕೆಯಾಗಲಿದೆ. ಇಲ್ಲಯ ಜನರ ಭವಿಷ್ಯತ್ತಿನಲ್ಲಿ ತೀವ್ರ ತೊಂದರೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ಅತಂಕಗಳಿದ್ದವು. ಇವೆಲ್ಲವುಗಳಿಗೆ ಈಗ ತೆರೆಬಿದ್ದಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಿದ್ದಾರೆ. ಉಭಯ ಗ್ರಾಮಸ್ಥರು ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಇವರಿಗೆ ಒತ್ತಡಹಾಕಿದ್ದರ ಪರಿಣಾಮ ಕಾರ್ಖಾನೆ ಸ್ಥಾಪನೆಗೆ ಅವಕಾಶ ಕೊಡದಿರಲು ನಿರ್ಧಾರಕ್ಕೆ ಮುಂದಾಗಿದ್ದಾರೆ. ಇದೇ ಆ.25ರಂದು ನಡೆಯುವ ಗ್ರಾಪಂ ಸಾಮಾನ್ಯಸಭೆಯಲ್ಲಿ ಸರ್ವ ಸದಸ್ಯರು ಎನ್‍ಒಸಿ ನೀಡಲು ತಿರಸ್ಕರಿಸಿ ಠರಾವು ಪಾಸ್ ಮಾಡಲಿದ್ದು, ಇದನ್ನು ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ನಿರ್ಧರಿಸಲಾಗಿದೆ.
ಶಾಸಕ ಹಿಟ್ನಾಳ ಮಾತನಾಡಿ, ‘ಗೊಂಡಬಾಳ ಮತ್ತು ಮುದ್ದಾಬಳಿ ಪರಿಸರದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯನ್ನು ಕೈಬಿಡಲು ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ಪರ್ಯಾಯವಾಗಿ ಹಿರೇಸಿಂದೋಗಿ-ಅಳವಂಡಿ ಮಧ್ಯದ ಜಮೀನಿನಲ್ಲಿ ಸ್ಥಾಪನೆಗೆ ಕ್ರಮವಹಿಸಲಾಗುವುದು, ಗ್ರಾಮಸ್ಥರ ವಿರೋಧದ ನಡುವೆ ಯಾವುದೇ ಕೆಲಸ ಮಾಡಲು ಇಷ್ಟಪಡುವುದಿಲ್ಲ’ ಎಂದು ಸಭೆಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮಾತನಾಡಿ, ‘ಗ್ರಾಮಸಭೆಯಲ್ಲಿ ಎನ್‍ಒಸಿ ನಿರಾಕರಣೆಯ ನಿರ್ಣಯದ ನಡಾವಳಿಯನ್ನು ದೃಢೀಕರಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿಕೊಟ್ಟರೆ ಅದನ್ನು ಸರ್ಕಾರಕ್ಕೆ ವರದಿ ಮಾಡಲಿದ್ದೇವೆ’ ಎಂದು ವಿವಿಧ ಗ್ರಾಮಸ್ಥರಿಗೆ ತಿಳಿಸಿದರು.
ಸಭೆಯಲ್ಲಿ ಮುಖಂಡ ಗೂಳಪ್ಪ ಹಲಗೇರಿ ಸೇರಿ ಗೊಂಡಬಾಳ ಗ್ರಾ.ಪಂ.ನ 17 ಸದಸ್ಯರು, ಮುಖಂಡರು, ರೈತ ಸಂಘದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.