
ಕುಕನೂರು: ತಾಲ್ಲೂಕಿನ ತಳಕಲ್ಲ ಗ್ರಾಮದಲ್ಲಿ ಮೂರು ಕಡೆ 50 ಅಡಿಗೂ ಹೆಚ್ಚು ಆಳವಿರುವ ತಗ್ಗುಗಳಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿರುವ ಅರ್ಧ ಎಕರೆಗೂ ಹೆಚ್ಚಿರುವ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗಗಳ ಹರಡುವ ಭೀತಿ ಎದುರಾಗಿದೆ.
ತಗ್ಗು ಪ್ರದೇಶದಲ್ಲಿ ನಿಂತಿರುವ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಸೊಳ್ಳೆಗಳ ಉತ್ಪಾದನೆಯ ಕೇಂದ್ರವಾಗಿದ್ದು, ಉಪಟಳ ಹೆಚ್ಚಾಗಿದೆ. ಜನರು, ಇದೇ ತಗ್ಗು ಪ್ರದೇಶದಲ್ಲಿ ಕಸ ಸುರಿಯುತ್ತಿದ್ದು, ದುರ್ನಾತ ಬೀರುತ್ತಿದೆ. ಗ್ರಾಮದ ಬೆಣ್ಣೆ ಕೆರೆಯ ಕಾಮಗಾರಿಯ ಮಣ್ಣನ್ನು ತಂದು ಅರ್ಧ ಭಾಗವನ್ನು ಮುಚ್ಚಲಾಗಿದೆ. ಇನ್ನೂ ಅರ್ಧ ತಗ್ಗನ್ನು ಮುಚ್ಚಬೇಕು. ತಗ್ಗು ಪ್ರದೇಶವನ್ನು ಮುಚ್ಚದಿದ್ದರೆ ಅಪಾಯಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರಾದ ಚೆನ್ನಮ್ಮ ಮರಗಿ, ಅಣ್ಣಮ್ಮ ಚಿಲವಾಡಗಿ, ಈರಮ್ಮ ಚಿಲವಾಡಗಿ, ನೀಲಮ್ಮ ಬಂಗೇರಿ ಎಚ್ಚರಿಸಿದ್ದಾರೆ.
ಅಂಗನವಾಡಿ ಹಿಂದೆ ಬಾವಿ: ತಳಕಲ್ಲ ಗ್ರಾಮದ ಅಂಗನವಾಡಿ ಕೇಂದ್ರ ಕಟ್ಟಡದ ಹಿಂದೆ ಬಾವಿಯಿದ್ಯು, ಸುತ್ತಲೂ ಜಾಲಿ, ಮುಳ್ಳಿನ ಗಿಡಗಳು ಬೆಳೆದಿವೆ. ನಿರ್ಜನ ಪ್ರದೇಶವಾಗಿದ್ದು, ಅಂಗನವಾಡಿ ಕೇಂದ್ರ ಇರುವುದರಿಂದ ಮಕ್ಕಳಿಗೆ ವಿಷ ಜಂತುಗಳ ಕಾಟ ಹೆಚ್ಚಿದೆ. ಈ ಸ್ಥಳವನ್ನು ಸ್ವಚ್ಛಗೊಳಿಸಿ, ಪಾಳು ಬಿದ್ದಿರುವ ಬಾವಿಗೆ ಭಾವಿಗೆ ಗರಸು ತುಂಬಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಬೆಣ್ಣಿಕೆರೆಯಲ್ಲಿರುವ ಹೂಳನ್ನು ತಗ್ಗು ಪ್ರದೇಶಗಳಿಗೆ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಪದವಿ ಕಾಲೇಜಿನ ಆವರಣದಲ್ಲಿ ಭಾವಿ: ಗ್ರಾಮದ ಸಮೀಪದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಬಾವಿಯಿದ್ದು, ನಿತ್ಯ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ. ಆದರೆ ಬಾವಿಯನ್ನು ಮುಚ್ಚಿಲ್ಲ. ಅಲ್ಲದೆ ರಕ್ಷಣಾ ವ್ಯವಸ್ಥೆಯನ್ನೂ ಮಾಡಿಲ್ಲ. ಸ್ಥಳೀಯ ಆಡಳಿತ ಅನಾಹುತವಾಗುವ ಮೊದಲು ಎಚ್ಚೆತ್ತುಕೊಂಡು ಕಾಳಜಿ ವಹಿಸಿ, ಭಾವಿ ಮುಚ್ಚಿದರೆ ತೊಂದರೆ ತಪ್ಪುತ್ತದೆ ಎಂದು ಪಾಲಕ ಮೈನುಸ್ಸಾಬ ತಂಬುಲಿ ಹೇಳಿದರು.
ಕೆರೆ ಮಣ್ಣು ಬಳಕೆಗೆ ಆಗ್ರಹ: ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದ ತಗ್ಗು ಪ್ರದೇಶ, ಅಂಗನವಾಡಿ ಹಿಂದಿನ ಬಾವಿ ಹಾಗೂ ಪದವಿ ಕಾಲೇಜಿನ ಆವರಣದ ಬಾವಿಗೆ ಗ್ರಾಮದಲ್ಲಿರುವ ಕೆರೆ ಹೂಳೆತ್ತುವ ಮಣ್ಣನ್ನು ಬಳಸಿಕೊಂಡು ಮುಚ್ಚಿದರೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರಾದ ಸುಶೀಲ ಮಾಲಿಪಾಟೀಲ, ಶೋಭಾ ಉಮೇಶಗೌಡ, ಗ್ರಾ.ಪಂ ಸದಸ್ಯ ತಿಮ್ಮಣ್ಣ ಚೌಡಿ, ಮುಖಂಡ ಸಿರಾಜುದ್ದೀನ್ ಕೊಪ್ಪಳ, ಪ್ರಕಾಶಗೌಡ ಮಾಲಿಪಾಟೀಲ, ಉಮೇಶ ಗೌಡ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.