ADVERTISEMENT

ರಾಗಿ ಮುದ್ದೆ, ಮಸಾಲಾ ರೈಸ್ ಸೂಪರ್

ಗಂಗಾವತಿ: ರಮೇಶ್‌ ಫಾಸ್ಟ್‌ಫುಡ್‌ ಕಮಾಲ್

ಶಿವಕುಮಾರ್ ಕೆ
Published 4 ಏಪ್ರಿಲ್ 2019, 17:40 IST
Last Updated 4 ಏಪ್ರಿಲ್ 2019, 17:40 IST
ರಮೇಶ್ ಫಾಸ್ಟ್ ಪುಡ್ ಸೆಂಟರ್
ರಮೇಶ್ ಫಾಸ್ಟ್ ಪುಡ್ ಸೆಂಟರ್   

ಗಂಗಾವತಿ: ಭತ್ತದ ನಾಡು ಗಂಗಾವತಿಯ ಜನರಿಗೆ ರಾಗಿ ಮುದ್ದೆ ಕೂಡ ಅಚ್ಚುಮೆಚ್ಚು. ಖಡಕ್ ಜೋಳದ ರೊಟ್ಟಿ, ಅನ್ನ ಸಾಂಬಾರು ಉಣ್ಣುವವರು ಸ್ವಲ್ಪ ರುಚಿ ಬದಲಿಸಿಕೊಳ್ಳಬೇಕೆಂದು ಬಯಸಿದರೆ ನೇರವಾಗಿ ನಗರದ ಬಸ್‌ ನಿಲ್ದಾಣದ ಬಳಿಯಿರುವ ‘ರಮೇಶ್‌ ಫಾಸ್ಟ್‌ಫುಡ್‌’ಗೆ ಬರುತ್ತಾರೆ.

20 ವರ್ಷಗಳಿಂದ ಪಾದಚಾರಿ ಮಾರ್ಗದ ಬಳಿ ಟಾಟಾ ಏಸ್‌ ವಾಹನದಲ್ಲಿ ‘ರಮೇಶ್‌ ಫಾಸ್ಟ್‌ಫುಡ್‌’ ಎಂಬ ಹೆಸರಿನಲ್ಲಿ ಹೋಟೆಲ್‌ ನಡೆಸುವ ರಮೇಶ್‌ ಅವರ ನಿಜವಾದ ಹೆಸರು ಗವಿಸಿದ್ದಪ್ಪ. ಆದರೆ ಜನರಿಗೆ ಅವರು ರಮೇಶ್‌ ಎಂದೇ ಚಿರಪರಚಿತರು. ಬೆಳಿಗ್ಗೆಯಿಂದ ಸಂಜೆಯವರೆಗೆ ಕಡಿಮೆ ದರದಲ್ಲಿ ರುಚಿಕಟ್ಟಾದ ಆಹಾರ ಸಿಗುತ್ತದೆ.

‘ಗಂಗಾವತಿಯಲ್ಲಿ ರಾಗಿಮುದ್ದೆ ಸಿಗುವುದು ತುಂಬಾ ಕಡಿಮೆ. ರಾಗಿ ಮುದ್ದೆ ಸವಿಯಬೇಕೆಂದು ಅನ್ನಿಸಿದಾಗಲೆಲ್ಲ ಇಲ್ಲಿ ಬರುತ್ತೇವೆ. ಒಂದು ರಾಗಿ ಮುದ್ದೆ ದರ ₹ 10. ಅದರ ಜೊತೆಗೆ ಶೇರ್ವಾ ಮತ್ತು ಈರುಳ್ಳಿ ಕೂಡ ಸಿಗುತ್ತದೆ. ₹ 20ಕ್ಕೆ ಮಸಾಲಾ ರೈಸ್‌ ಸಿಗುತ್ತದೆ. ಒಟ್ಟಾರೆ ₹ 30ರಲ್ಲಿ ಹೊಟ್ಟೆ ತುಂಬುತ್ತದೆ’ ಎಂದು ಗ್ರಾಹಕರು ಹೇಳುತ್ತಾರೆ.

ADVERTISEMENT

‘ಬೆಳಿಗ್ಗೆ 10ರಿಂದ ಸಂಜೆವರೆಗೆ ಹೋಟೆಲ್ ನಡೆಸುತ್ತೇವೆ. ಕುಟುಂಬದವರೇ ನಡೆಸುವ ಈ ಹೋಟೆಲ್‌ನಲ್ಲಿ ನಾಲ್ವರು ಕೆಲಸ ಮಾಡುತ್ತೇವೆ. ಪ್ರತಿ ದಿನ 250ಕ್ಕೂ ಹೆಚ್ಚು ಮುದ್ದೆ ಮಾಡುತ್ತೇವೆ. ಒಟ್ಟಾರೆ ಆಹಾರ ಸಿದ್ಧಪಡಿಸಲು 20 ಕೆಜಿ ಅಕ್ಕಿ ಮತ್ತು 25 ಕೆಜಿ ರಾಗಿ ಬೇಕಾಗುತ್ತದೆ’ ಎಂದು ಹೋಟೆಲ್ ಮಾಲೀಕ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಂಸಾಹಾರ ಪ್ರಿಯರಿಗೆ ಇಲ್ಲಿ ಚಿಕನ್ ಸಿಗುತ್ತದೆ. ಮೊಟ್ಟೆ ಕೂಡ ಲಭ್ಯ. ರುಚಿಕಟ್ಟಾದ ಆಹಾರ ಸಿದ್ಧಪಡಿಸಿ, ಗ್ರಾಹಕರಿಗೆ ಸಂತೃಪ್ತಗೊಳಿಸುವುದೇ ನಮ್ಮ ಗುರಿ. ಇಲ್ಲಿ ಕೆಎಸ್‌ಆರ್‌ಟಿಸಿ ನೌಕರರು, ನಗರಸಭೆ, ಕೋರ್ಟ್‌ಗೆ ಬರುವ ಜನರು, ಶಾಲಾಕಾಲೇಜು ವಿದ್ಯಾರ್ಥಿಗಳು ಆಹಾರ ಸವಿಯುತ್ತಾರೆ’ ಎಂದು ಅವರು ತಿಳಿಸಿದರು.

*
ಖಾನಾವಳಿಯ‌ಲ್ಲಿ ಊಟಕ್ಕೆ ₹ 50 ಇಲ್ಲವೇ ₹ 60 ಕೊಡಬೇಕು. ಆದರೆ, ಇಲ್ಲಿ ₹ 30ಕ್ಕೆ ಹೊಟ್ಟೆ ತುಂಬುತ್ತೆ. ಊಟವೂ ರುಚಿ ಆಗಿರುತ್ತದೆ.
–ಹುಲುಗಪ್ಪ, ಗಂಗಾವತಿ

*
ರುಚಿಕಟ್ಟಾದ ಆಹಾರ ಸವಿದು ಗ್ರಾಹಕರು ಸಂತಸಪಟ್ಟರೆ, ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಶುಚಿ–ರುಚಿ ಆಹಾರಕ್ಕೆ ಆದ್ಯತೆ ನೀಡುತ್ತೇವೆ.
–ರಮೇಶ್, ಹೋಟೆಲ್ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.