ADVERTISEMENT

‘ನಿಸರ್ಗಕ್ಕಿಂತ ಮಿಗಿಲು ಯಾವುದು ಇಲ್ಲ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:21 IST
Last Updated 5 ಡಿಸೆಂಬರ್ 2022, 4:21 IST
ಕನಕಗಿರಿಯಲ್ಲಿ ನಡೆದ ಸಾಯಿ ಪಂಕ್ಷನ್ ಹಾಲ್‌ ಉದ್ಘಾಟನೆ ಹಾಗೂ ಪ್ರವಚನ‌ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು
ಕನಕಗಿರಿಯಲ್ಲಿ ನಡೆದ ಸಾಯಿ ಪಂಕ್ಷನ್ ಹಾಲ್‌ ಉದ್ಘಾಟನೆ ಹಾಗೂ ಪ್ರವಚನ‌ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು   

ಕನಕಗಿರಿ: ‘ಜಗತ್ತಿನಲ್ಲಿ ನಿಸರ್ಗಕ್ಕಿಂತ ಮಿಗಿಲಾದ ವಸ್ತು ಬೇರೆ ಯಾವುದು ಇಲ್ಲ. ಮಾನವ ಎಷ್ಟೇ ಸಂಪತ್ತು ಗಳಿಸಿದರೂ ಕೊಟ್ಟು ಹೋಗಬೇಕು ಇಲ್ಲವೆ ಇಲ್ಲಿಯೇ ಬಿಟ್ಟು ಹೋಗಬೇಕಾಗಿದೆ’ ಎಂದು ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಬಸರಿಹಾಳ ಗ್ರಾಮದ ರಸ್ತೆಯಲ್ಲಿ ಭಾನುವಾರ ನಡೆದ ಸಾಯಿ ಪಂಕ್ಷನ್ ಹಾಲ್ ಉದ್ಘಾಟನೆ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾನವರು ತಮ್ಮ ಬೇಕು, ಬೇಡಿಕೆಗಳ ಈಡೇರಿಕೆಗಾಗಿ ಗುಡಿ, ಗುಂಡಾರಗಳನ್ನು ನಿರ್ಮಿಸಿಕೊಂಡಿ ದ್ದಾರೆ. ದೇಗುಲಗಳಿಗೆ ಕೇವಲ ₹11 ನೀಡಿ ರಶೀದಿ ಪಡೆಯುವ ಮನುಷ್ಯ ತನ್ನ ಮೂರನೇ ತಲೆಮಾರಿಗೆ ಆಗುವಷ್ಟು ಸಂಪತ್ತು ಗಳಿಸುವಂಥ ವರ ನೀಡು ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಾನೆ. ನಿಸರ್ಗ ಮಾನವ ಕುಲಕ್ಕೆ ಒಳಿತನ್ನು ಬಯಸಿದರೆ ಮನುಷ್ಯ ಬೇಡುವ ಗುಣವನ್ನು ಬೆಳಸಿಕೊಂಡಿದ್ದಾನೆ’ ಎಂದು ತಿಳಿಸಿದರು.

ADVERTISEMENT

‘ಊಟ ಮಾಡಿ ಉಳಿಸಿದ ಅನ್ನ, ಸಾಂಬರು ತಿಂದ, ಮುಸುರಿ ನೀರು ಕುಡಿದ ಆಕಳು ಪೂಜೆ, ಅಭಿಷೇಕಕ್ಕೆ ಬೇಕಾದ ಹಾಲು, ತುಪ್ಪ ನೀಡುತ್ತದೆ. ಇಂಥ ಮಾನವೀಯ ಗುಣಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

‘ಕೋಳಿ, ಕುರಿ, ಕೋಣಗಳು ದೆವ್ವಗಳಾಗುವುದಿಲ್ಲ. ಪ್ರಕೃತಿ ತಮಗೆ ನೀಡಿದ ಶಕ್ತಿ, ಸಾಮಾರ್ಥ್ಯದಡಿಯಲ್ಲಿ ಜೀವಿಸುತ್ತವೆ. ಆದರೆ ಮನುಷ್ಯನಿಗೆ ಎಷ್ಟೇ ಸಂಪತ್ತು ಆಸ್ತಿ ಇದ್ದರೂ ಮತ್ತೆ ಬೇಕು ಎಂಬ ಭಾವ ಹೊಂದಿರುತ್ತಾನೆ. ಈ ಭೂಮಿಯಲ್ಲಿ ಜನ್ಮ ತಾಳಿದ ವ್ಯಕ್ತಿ ಸಮಾಜಕ್ಕೆ ದಾನ, ಧರ್ಮ ಮಾಡುವ ಮೂಲಕ ತನ್ನದೆಯಾದ ಕೊಡುಗೆಯನ್ನು ಕೊಟ್ಟು ಹೋಗುವ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಚಿಕ್ಕೇನಕೊಪ್ಪದ ಶಿವಶಾಂತವೀರ ಶರಣರು ಮಾತನಾಡಿ, ‘ಅಧ್ಯಾತ್ಮ ಮನುಷ್ಯನಲ್ಲಿ ಸಾತ್ವಿಕ ಗುಣ ಬೆಳೆಸುತ್ತದೆ. ಶ್ರೀಮಂತಿಕೆ ಬಂದಾಗ ವ್ಯಕ್ತಿ ಹೃದಯ ಶ್ರೀಮಂತವಾಗಬೇಕು’ ಎಂದರು.

ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ.ಚೆನ್ನಮಲ್ಲಸ್ವಾಮಿ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಚೆನ್ನಬಸಯ್ಯ ಸ್ವಾಮಿ, ಉದ್ಯಮಿಗಳಾದ ಮೃತ್ಯುಂಜಯ ವಸ್ತ್ರದ, ತಿರುಮಲರಾವ್ ಮಾತನಾಡಿದರು.

ಸೂಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ತಾತ, ಮಾಜಿ ಸಚಿವ ಶಿವರಾಜ ತಂಗಡಗಿ, ಶಾಸಕ ಬಸವರಾಜ ದಢೇಸೂಗೂರು, ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ ಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್ ಇದ್ದರು. ಶಿವರುದ್ರಯ್ಯ ಸ್ವಾಮಿ ಚಿಂತಕುಂಟಿಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.