ADVERTISEMENT

ಕೊಪ್ಪಳದಲ್ಲೊಂದು ಕೊಕ್ಕರೆಗಳ ವಠಾರ!

‘ಹೆರಿಗೆ ಮನೆ’ಯಾದ ಮರ, ಜನನಿಬಿಡ ಪ್ರದೇಶದಲ್ಲೇ ಗೂಡು

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 14:35 IST
Last Updated 18 ಜುಲೈ 2022, 14:35 IST
ಕೊಪ್ಪಳದಲ್ಲಿ ಗೂಡಿನಲ್ಲಿ ಮರಿಯೊಂದಿಗೆ ಬಿಳಿ ಮತ್ತು ಮಾಸಲು ಕಿತ್ತಳೆ ಬಣ್ಣವನ್ನು ಹೊಂದಿರುವ ಬೆಳ್ಳಕ್ಕಿ ಚಿತ್ರ ಮಾಹಿತಿ: ಪ್ರಕಾಶ ಕಂದಕೂರ
ಕೊಪ್ಪಳದಲ್ಲಿ ಗೂಡಿನಲ್ಲಿ ಮರಿಯೊಂದಿಗೆ ಬಿಳಿ ಮತ್ತು ಮಾಸಲು ಕಿತ್ತಳೆ ಬಣ್ಣವನ್ನು ಹೊಂದಿರುವ ಬೆಳ್ಳಕ್ಕಿ ಚಿತ್ರ ಮಾಹಿತಿ: ಪ್ರಕಾಶ ಕಂದಕೂರ   

ಕೊಪ್ಪಳ: ಪಕ್ಷಿಗಳು ಸಾಮಾನ್ಯವಾಗಿ ಜನಸಂಚಾರ ಇರುವ ಕಡೆಗಳಲ್ಲಿ ಗೂಡು ಕಟ್ಟಿಕೊಳ್ಳುವುದು ಅಪರೂಪ. ಮನುಷ್ಯನ ಜೀವನ ಶೈಲಿ ಅರಿತಿರುವ ಅವುಗಳು ಆ ಕಡೆ ಸುಳಿಯಲು ಕೂಡ ಮನಸ್ಸು ಮಾಡುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕೊಕ್ಕರೆಗಳ ಗುಂಪೊಂದು ನಗರದ ಜನನಿಬಿಡ ಪ್ರದೇಶದಲ್ಲಿಯೇ ವಾಸ್ತವ್ಯ ಹೂಡಿದೆ.

ಇಲ್ಲಿನ ವಿದ್ಯಾನಗರದ ಎಸ್‍ಬಿಐ ಬ್ಯಾಂಕ್ ಪಕ್ಕದ ಮರವೊಂದರಲ್ಲಿ ನೂರಾರು ಕೊಕ್ಕರೆಗಳು ಬೀಡು ಬಿಟ್ಟಿವೆ. ಮರದ ತುಂಬಾ ಸುಮಾರು 100 ಗೂಡುಗಳನ್ನು ಕಟ್ಟಿಕೊಂಡಿದ್ದು, ನೋಡುಗರನ್ನು ಸೆಳೆಯುತ್ತಿವೆ.

ಕೊಂಬೆಗೆ ಹತ್ತಾರರಂತೆ, ಒಂದರ ಪಕ್ಕದಲ್ಲಿ ಇನ್ನೊಂದು ಗೂಡುಗಳನ್ನು ನಿರ್ಮಿಸಿಕೊಂಡಿವೆ. ಅವುಗಳಿಗೆ ಗೂಡುಕಟ್ಟಿಕೊಳ್ಳಲು ಆ ರಸ್ತೆಯ ಸುತ್ತಮುತ್ತ ಬೃಹತ್ ಗಾತ್ರದ ಸಾಕಷ್ಟು ಮರಗಳಿವೆ. ಆದರೂ ಅವೆಲ್ಲವುಗಳನ್ನು ಬಿಟ್ಟು ಚೂಪಾದ, ತೆಳ್ಳಗಿನ, ಉದ್ದುದ್ದ ಮುಳ್ಳುಗಳನ್ನು ಹೊಂದಿರುವ ಜಾಲಿ, ಕರಿ ಜಾಲಿ ಮರವನ್ನೇ ಅವು ಆಯ್ಕೆ ಮಾಡಿಕೊಂಡಿವೆ.

ADVERTISEMENT

ಸ್ಥಳೀಯರು ಹೇಳುವಂತೆ ಬಿಳಿ ಮತ್ತು ಮಾಸಲು ಕಿತ್ತಳೆ ಬಣ್ಣವನ್ನು ಹೊಂದಿರುವ ಈ ಬೆಳ್ಳಕ್ಕಿಗಳು ಕಳೆದು ಎರಡು ವರ್ಷಗಳಿಂದ ಇಲ್ಲಿಗೆ ಬರುತ್ತಿವೆ. ಮಾರ್ಚ್‌ನಿಂದ ನವೆಂಬರ್‌ ತನಕ ಸಂತಾನೋತ್ಪತ್ತ ಪ್ರಕ್ರಿಯೆ ನಡೆಸುತ್ತವೆ. ಆ ಸಮಯದಲ್ಲಿಯೇ ಗುಂಪು ಗುಂಪಾಗಿ ಬಂದು ಈ ಮರದಲ್ಲಿ ಬೀಡು ಬಿಡುತ್ತವೆ.

ಬಳಿಕ ಗೂಡು ಕಟ್ಟುವುದು, ಮೊಟ್ಟೆ ಇಡುವುದು, ಮರಿಗಳ ಲಾಲನೆ, ಪೋಷಣೆ ಮುಗಿಸಿಕೊಂಡು ಸೆಪ್ಟೆಂಬರ್‌ ಅಂತ್ಯಕ್ಕೆ ಬೇರೆಡೆಗೆ ಸಾಗುತ್ತವೆ. ಆಗ ಇಡೀ ಮರವೇ ಖಾಲಿಯಾಗಿದೆಯೇನೋ ಅನ್ನಿಸುತ್ತದೆ. ಮತ್ತೆ ಮುಂದಿನ ವರ್ಷ ಮಾರ್ಚ್‌ನಲ್ಲಿ ಅವುಗಳ ಕಲರವ ಕಾಣಿಸುತ್ತದೆ.

ಸುತ್ತಮುತ್ತಲಿನ ಮಕ್ಕಳು ನಿತ್ಯ ಇಲ್ಲಿಗೆ ಬಂದು ಅವುಗಳನ್ನು ನೋಡಿ, ಕಲರವ ಕೇಳಿ ಖುಷಿ ಪಡುತ್ತಾರೆ. ಯಾರಿಗೂ ತೊಂದರೆ ನೀಡದ ಈ ಸುಂದರ ಕೊಕ್ಕರೆಗಳ ವಠಾರ ಸೆಪ್ಟೆಂಬರ್‌ನಲ್ಲಿ ಖಾಲಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.