
ಜಾಲಹಳ್ಳಿ: ‘ರಾಜ್ಯದಲ್ಲಿ ಈ ಹಿಂದೆ ಕುರುಬ ಎಂದು ಹೇಳಿಕೊಳ್ಳಲು ಕೆಲವರಲ್ಲಿ ಹಿಂಜರಿಕೆ ಇತ್ತು. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕುರುಬ ಸಮಾಜದವರಾಗಿರುವುದರಿಂದ ಯಾವುದೇ ಹಿಂಜರಿಕೆ ಇಲ್ಲದೇ ಜನ ತಮ್ಮನ್ನು ತಾವು ಕುರುಬ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ’ ಎಂದು ರಾಜ್ಯ ಮಹಿಳಾ ಲೇಖಕಿಯರ ಸಂಘದ ಅಧ್ಯಕ್ಷೆ ಸುನಂದಮ್ಮ ಹೇಳಿದರು.
ಬುಧವಾರ ಸಮೀಪದ ತಿಂಥಣಿ ಬ್ರಿಜ್ಡ್ ಹತ್ತಿರದ ಕಾಗಿನೆಲೆ ಕನಕಗುರು ಪೀಠದಲ್ಲಿ ನಡೆದ ಹಾಲುಮತ ಸಾಹಿತ್ಯ ಸಮ್ಮೇಳನದ ಕೊನೆಯ ದಿನದ ಕಾರ್ಯಕ್ರದ ಅಧ್ಯಕ್ಷೆ ವಹಿಸಿ ಮಾತನಾಡಿದರು.
‘ಯಾವುದೇ ಧರ್ಮ ಅಥವಾ ಜಾತಿಗಳಲ್ಲಿ ಮಹಿಳೆಯರಿಗೆ ಸರಿಮಾನ ಗೌರವ ನೀಡಿ ಅವರನ್ನು ಎಲ್ಲ ರಂಗಗಳಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾರೀ ಅವರಿಗೆ ಮಾತ್ರ ಸಮಾಜ ಗೌರವ ನೀಡುತ್ತದೆ. ಶ್ರೇಣಿಕೃತ ಸಮಾಜದಲ್ಲಿ ಈಗ ನಮ್ಮನ್ನು ಯಾವ ಸ್ಥಾನದಲ್ಲಿ ಇತರೆ ಸಮಾಜದವರು ನೋಡುತ್ತಾರೋ ಅದೇ ರೀತಿ ನಾವು ನೋಡುವುದು ಸರಿ ಅಲ್ಲ’ ಎಂದರು.
ಕನಕಗುರು ಪೀಠದ ಸಿದ್ದಾರಾಮನಂದ ಸ್ವಾಮೀಜಿ ಮಾತನಾಡಿ, ‘ಸಮಾಜಕ್ಕೆ ಸೇರಿದ ಅನೇಕ ಯುವಕರು ಗ್ರಾಮೀಣ ಪ್ರದೇಶದಲ್ಲಿ ಸಮಾಜಕ್ಕೆ ಅನುಕೂಲವಾಗುವ ಕೆಲಸ ಮಾಡುತ್ತಾರೆ. ಅವರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಮಠ ನಿರಂತರವಾಗಿ ಮಾಡುತ್ತದೆ. ಮುಂದಿನ ದಿನಗಳಲ್ಲಿ ರಥೋತ್ಸವ ಕಾರ್ಯ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಜನಪದ ವಿಶ್ವವಿದ್ಯಾಲಯದ ಪ್ರೊ. ಮಲ್ಲಿಕಾರ್ಜುನ ಮಾನ್ಪಡೆ, ಬುಡಕಟ್ಟು ಜನರ ಸಾಮಾಜಿಕ ಪರಿಸ್ಥಿತಿ ವಿಷಯದ ಬಗ್ಗೆ ಮಾತನಾಡಿ, ‘ದೇಶದಲ್ಲಿ ಏಕ ಸಂಸ್ಕೃತಿ ಮತ್ತು ಏಕಧರ್ಮ ಎಂದು ಹೇಳುವ ಬಲಪಂಥಿಯ ಸಿದ್ಧಾಂತ ನಮ್ಮ ಬಹುತ್ವ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಿದೆ. ನಮ್ಮ ದೇಶದಲ್ಲಿ ಬಹುಬಾಷೆ, ಬಹು ಸಂಸ್ಕೃತಿ ಇದೆ. ಈ ಸಂಸ್ಕೃತಿಯಲ್ಲಿ ಅನೇಕ ತಳ ಸಮುದಾಯದ ಜಾತಿಗಳಿವೆ. ಇದರಲ್ಲಿ ಅಲೆಮಾರಿಗಳು, ಜೇನು ಕುರುಬರು, ಕಾಡು ಕುರುಬರು, ಗೊಂಡ ಕುರುಬರು ಸೇರಿದಂತೆ ಅನೇಕ ಪಂಗಡಗಳು ಇವೆ. ಇವುಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚನ್ನದಾಸ, ಮಾಲದಾಸ, ಹೊಲೆಯದಾಸ, ಮಾದಿಗ ದಾಸ ಎನ್ನುವ ಗುಂಪುಗಳು ಇವೆ. ಇವೆಲ್ಲವೂ ಬಹು ಸಂಸ್ಕೃತಿ ಆಚರಣೆ ಮಾಡುತ್ತಾ ಬಂದಿವೆ. ಆದರೆ ವೈಷ್ಣವ ಮತ್ತು ಶೈವ ಸಂಸ್ಕೃತಿಗಳು ಬೆಳೆದು ಬಹುಸಂಸ್ಕೃತಿ ಮೇಲೆ ದಾಳಿ ಮಾಡುತ್ತಿವೆ’ ಎಂದು ಹೇಳಿದರು.
ನಾರಾಯಣ ರೋಲೆಕರ್, ಶಾಂತಪ್ಪ ಡಂಬಳ ದೇವದುರ್ಗ ವಿವಿಧ ವಿಷಯಗಳ ಕುರಿತು ವಿಚಾರ ಮಂಡಿಸಿದರು.
ಕೆ.ಆರ್ ನಗರದ ಕಾಗಿನೆಲೆ ಕನಕಗುರು ಪೀಠದ ಶಿವಾನಂದಪುರಿ ಸ್ವಾಮೀಜಿ, ಅಗತೀರ್ಥ ರೇವಣಸಿದ್ದೇಶ್ವರ ಮಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ, ಮಖಣಾಪುರದ ಸೋಮಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಹೊಸಪೇಟೆಯ ಕಾಮಣ್ಣ ಮೇತ್ರಿ, ಕೆ.ಪಿ.ಎಸ್.ಸಿ ಮಾಜಿ ಸದಸ್ಯ ಎಚ್.ಡಿ.ಪಾಟೀಲ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ ಶಿವಪ್ಪ, ಮಾಜಿ ಶಾಸಕ ಅಮರೇಗೌಡ ಬಯ್ಯಪುರ, ಶಹಾಪುರದ ಡಿಡಿಯು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಭೀಮಣ್ಣ ಮೇಟಿ, ನಾಗವೇಣಿ, ಮುದಕಪ್ಪ ಶಿಕ್ಷಕ, ವಿ.ಎಂ.ಮೇಟಿ ವಕೀಲ, ಶರಣಯ್ಯ ಒಡೆಯರ್, ಚಂದಪ್ಪ ಬುದ್ದಿನ್ನಿ, ಬಸವರಾಜ ವಿಭೂತಿಹಳ್ಳಿ, ಬಸವಂತರಾಯ ಕುರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಚಿದಾನಂದ ಗುರುವಿನ ಹಾಗೂ ಶಿಕ್ಷಕ ನಾಗರಾಸಜ ಹರಳಿಮರ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.