
ಕುಷ್ಟಗಿ: ಕೃಷಿ ಪಂಪ್‌ಸೆಟ್‌ಗಳಿಗೆ ಮಧ್ಯರಾತ್ರಿ ಮೂರು ಫೇಸ್ ವಿದ್ಯುತ್ ಪೂರೈಸುತ್ತಿರುವುದನ್ನು ಖಂಡಿಸಿ ತಾಲ್ಲೂಕಿನ ಗೋತಗಿ ಹಾಗೂ ಸುತ್ತಲಿನ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿದರು.
ಹಗಲು ಹೊತ್ತಿನಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ಏಳು ತಾಸು ಮೂರು ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಅದಕ್ಕೆ ವ್ಯತಿರಿಕ್ತ ಜೆಸ್ಕಾಂ ಅಧಿಕಾರಿಗಳು ಸಂಜೆ 6ರಿಂದ ಮಧ್ಯರಾತ್ರಿವರೆಗೆ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ಕತ್ತಲಿನಲ್ಲಿ ಜೀವ ಕೈಯಲ್ಲಿ ಹಿಡಿದು ಹೊಲಗಳಿಗೆ ನೀರು ಹರಿಸಬೇಕಿದೆ. ರಾತ್ರಿ ವೇಳೆ ಹಾವು ಕಡಿತಕ್ಕೆ ಒಳಗಾಗಿರುವ ರೈತ ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಸರ್ಕಾರದ ನೀತಿ ಒಂದಾಗಿದ್ದರೆ ಇಲ್ಲಿಯ ಅಧಿಕಾರಿಗಳು, ಪವರ್‌ಮ್ಯಾನ್‌ಗಳ ವರ್ತನೆಯೇ ಬೇರೆ ಇದೆ. ಪವರ್‌ಮ್ಯಾನ್ ಒಬ್ಬ ಸದಾ ಪಾನಮತ್ತನಾಗಿದ್ದು ರೈತರಿಗೆ ಬಹಳಷ್ಟು ತೊಂದರೆಯಾಗಿದೆ. ಹಗಲಿನಲ್ಲಿ ವಿದ್ಯುತ್ ನೀಡಬೇಕು ಮತ್ತು ಪವರ್‌ಮ್ಯಾನ್‌ಗಳನ್ನು ಬದಲಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ನಜೀರ್ ಸಾಬ್ ಮೂಲಿಮನಿ, ರೈತ ಮುಖಂಡ ಆರ್.ಕೆ.ದೇಸಾಯಿ, ಶಂಕರಗೌಡ ಬೀಳಗಿ, ಹುಸೇನಸಾಬ್ ಬೇವಿನಗಿಡದ, ಕಾಂತಪ್ಪ ಕಮತರ, ರವೀಂದ್ರನಾಥ್ ದೇಸಾಯಿ, ಹನುಮಂತ ತಳವಾರ, ಪುಂಡಲಿಕಪ್ಪ ಬೂದಿಹಾಳ, ಶಾಂತಪ್ಪ ಕರಡಿ, ಸಂಗಪ್ಪ ಬೂದಿಹಾಳ ಹಾಗೂ ಸುತ್ತಲಿನ ಗ್ರಾಮಗಳ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.