ADVERTISEMENT

ಕುಷ್ಟಗಿ: ಸಾಮಗ್ರಿ ಖರೀದಿಗೆ ಮಾರುಕಟ್ಟೆಗೆ ಲಗ್ಗೆ

ಕಿಕ್ಕಿರಿದು ನೆರೆದ ಗ್ರಾಹಕರು, ದೀಪಾವಳಿ ಖರೀದಿ ಧಮಾಕಾ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 5:00 IST
Last Updated 21 ಅಕ್ಟೋಬರ್ 2025, 5:00 IST
ಕುಷ್ಟಗಿಯ ಮಳಿಗೆಯೊಂದರಲ್ಲಿ ಬಟ್ಟೆ ಖರೀದಿಸುತ್ತಿರುವ ಗ್ರಾಹಕರು
ಕುಷ್ಟಗಿಯ ಮಳಿಗೆಯೊಂದರಲ್ಲಿ ಬಟ್ಟೆ ಖರೀದಿಸುತ್ತಿರುವ ಗ್ರಾಹಕರು   

ಕುಷ್ಟಗಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿವಿಧ ಸಾಮಗ್ರಿಗಳ ಖರೀದಿಗೆಂದು ಪಟ್ಟಣಕ್ಕೆ ವಾರದ ಸಂತೆ ದಿನವಾದ ಭಾನುವಾರ ಲೆಕ್ಕವಿಲ್ಲದಷ್ಟು ಸಂಖ್ಯೆ ಜನರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಕಂಡುಬಂದಿತು.

ಸಂತೆ ಮೈದಾನ, ತರಕಾರಿ ಮಾರುಕಟ್ಟೆ, ಎಪಿಎಂಸಿ ಪ್ರಾಂಗಣ ಸೇರಿದಂತೆ ಎಲ್ಲೆಂದರಲ್ಲಿ ಜನವೋ ಜನ, ವಿವಿಧ ರಸ್ತೆಗಳು, ಪ್ರಮುಖ ವೃತ್ತಗಳಲ್ಲಿನ ವಾಣಿಜ್ಯ ಸಂಕೀರ್ಣಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿತು. ರಸ್ತೆಗಳಲ್ಲಿ ಕಾಲಿಡದಷ್ಟು ರೀತಿಯಲ್ಲಿ ಜನರು ಕಂಡುಬಂದರು. ದಿನಸಿ ಅಂಗಡಿ, ಅಲಂಕಾರದ ವಸ್ತುಗಳ ಅಂಗಡಿ, ಬಟ್ಟೆ ಬಜಾರಗಳಲ್ಲಿ ಗ್ರಾಹಕರು ಕಿಕ್ಕಿರಿದು ನೆರೆದಿದ್ದರು. ಕೆಲ ಅಂಗಡಿಗಳಲ್ಲಂತೂ ಸರದಿಯಲ್ಲಿ ನಿಂತು ವಿವಿಧ ಸಾಮಗ್ರಿಗಳನ್ನು ಖರೀದಿಸಿದರು.

ದೀಪಾವಳಿ ಹಬ್ಬದ ಮುನ್ನಾದಿನ ಹಣ್ಣು, ಹೂವು, ಅಲಂಕಾರದ ವಸ್ತುಗಳು, ಮನೆಗೆ ಬೇಕಾದ ಪೂಜಾ ಸಾಮಗ್ರಿಗಳು, ಪಟಾಕಿ, ತರಕಾರಿ ಅಂಗಡಿಗಳ ಬಳಿ ಜನರು ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದರು. ಸಾಕಷ್ಟು ಬೈಕ್‌ಗಳು ಅಂಗಡಿಗಳ ಮುಂದೆ ನಿಂತಿದ್ದರಿಂದ ಜನರ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ಪ್ರಮುಖ ಅಡ್ಡಿಯಾಗಿತ್ತು.

ADVERTISEMENT

ಅದೇ ರೀತಿ ದೀಪಾವಳಿ ಹಬ್ಬದ ಸಿದ್ಧತೆ ಜೋರಾಗಿದೆ. ಮನೆಗಳು, ಡಬ್ಬಾ ಅಂಗಡಿಗಳೂ ಸೇರಿದಂತೆ ಎಲ್ಲ ವ್ಯಾಪಾರ ಮಳಿಗೆಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿಯುವ ಕೆಲಸ ಜೋರಾಗಿತ್ತು. ದೀಪಾವಳಿಗೆ ಹೊಸ ಲೆಕ್ಕ ಆರಂಭಿಸುವ ಸಂಪ್ರದಾಯ ಇದ್ದು ವ್ಯಾಪಾರಸ್ಥರು ಹೊಸ ಖಾತೆ ಕೀರ್ದಿಗಳನ್ನು ಖರೀದಿಸಿದ್ದು ಕಂಡುಬಂದಿತು. ಅಲ್ಲದೆ ಅಂಗಡಿಗಳ ಕೆಲಸಗಾರರಿಗೆ, ನೌಕರರಿಗೆ ಹೊಸ ಬಟ್ಟೆಗಳನ್ನು ವಿತರಿಸಲು ಮುಂದಾಗಿದ್ದು ತಿಳಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.