
ಕುಷ್ಟಗಿ: ತಾಲ್ಲೂಕಿನ ಕುರುಬನಾಳ ಗ್ರಾಮಕ್ಕೆ ಪಟ್ಟಣದಿಂದ ಸಂಪರ್ಕ ಕಲ್ಪಿಸುವ ರಸ್ತೆ ಅಲ್ಲಲ್ಲಿ ಹಾಳಾಗಿದ್ದು ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ, ವಿಜಯ ಚಂದ್ರಶೇಖರ ಶಾಲೆ ಬಳಿ ಹಾದು ಹೋಗಿರುವ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣಗೊಂಡಿವೆ. ಡಾಂಬರ್ ಕಿತ್ತು ಹೋಗಿದ್ದು ದ್ವಿಚಕ್ರ, ತ್ರಿಚಕ್ರ ವಾಹನಗಳನ್ನು ನಡೆಸುವುದು ದುಸ್ತರವಾಗಿದೆ. ಎಷ್ಟೋ ಜನ ಗುಂಡಿಗಳಿರುವುದು ಗೊತ್ತಾಗದೆ ರಾತ್ರಿ ಮುಗ್ಗರಿಸಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ ಎಂದು ಕುರುಬನಾಳ ಗ್ರಾಮಸ್ಥರು ಹೇಳಿದರು.
ರೈತರು ಹೊಲಗದ್ದೆ, ತೋಟಗಳಿಗೆ ಹೋಗಿಬರಲು ಇದೇ ರಸ್ತೆ ಬಳಸುತ್ತಿದ್ದು ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ತೊಂದರೆಪಡುತ್ತಿದ್ದಾರೆ. ಟ್ರ್ಯಾಕ್ಟರ್‌ಗಳ ಮೂಲಕ ಹೊಟ್ಟು, ಮೇವು ಸಾಗಿಸುವುದಕ್ಕೆ ಪರದಾಡುವಂತಾಗಿದೆ. ನಿರ್ವಹಣೆ ಇಲ್ಲದೆ ರಸ್ತೆ ಗಬ್ಬೆದ್ದುಹೋಗಿದೆ ಎಂದು ರೈತರಾದ ಬಸವರಾಜ, ಹನುಮಗೌಡ ಇತರರು ಬೇಸರ ಹೊರಹಾಕಿದರು.
ರೈಲ್ವೆ ಮೇಲ್ಸೇತುವೆ ನಿರ್ಮಾಣದ ಸಮಯದಲ್ಲಿ ರಸ್ತೆಯನ್ನು ಹಾಳುಗೆಡವಲಾಗಿತ್ತು, ನಂತರ ದುರಸ್ತಿ ಮಾಡಿದರೂ ಕಳಪೆ ಕಾಮಗಾರಿಯಿಂದಾಗ ಕೆಲವೇ ದಿನಗಳಲ್ಲಿ ಹಾಳಾಗಿಹೋಗಿದೆ. ರಸ್ತೆ ಸುಸ್ಥಿತಿಗೆ ಗಮನಹರಿಸುವಂತೆ ಮನವಿ ಮಾಡಿದರೂ ರೈಲ್ವೆ ಇಲಾಖೆಯವರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.
ಕುರಬನಾಳ ಕಂದಕೂರು ರಸ್ತೆ ಹಾಳಾಗಿದ್ದು ಗಮನಕ್ಕಿದೆ. ಹಿಂದಿನ ಗುತ್ತಿಗೆದಾರನ ಅಸಮರ್ಪಕ ಕಾಮಗಾರಿಯೇ ಇದಕ್ಕೆ ಕಾರಣ. ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ– ಅಶೋಕ ಮುದಗೌಡರ, ಎಇಇ ನೈಋತ್ಯ ರೈಲ್ವೆ
ರೈಲ್ವೆ ಮೇಲ್ಸೇತುವೆ ಕಟ್ಟಿದ ನಂತರ ನಿರ್ಮಾಣಗೊಂಡಿದ್ದ ರಸ್ತೆ ಕೆಲವೇ ದಿನಗಳಲ್ಲಿ ಹಾಳಾಗಿದ್ದು ದುರಸ್ತಿಗೆ ಅಧಿಕಾರಿಗಳು ಗಮನಹರಿಸಬೇಕು– ಹನುಮಗೌಡ ಪಾಟೀಲ, ಕುರುಬನಾಳ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.