ಕುಷ್ಟಗಿ: ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಕುಷ್ಟಗಿ ತಾಲ್ಲೂಕಿನ ರಸ್ತೆಗಳ ಸ್ಥಿತಿ ಉತ್ತಮವಾಗಿಯೇ ಇದೆ. ಗುಂಡಿ ಬಿದ್ದು ಸಂಚಾರಕ್ಕೆ ಎರವಾಗಿರುವ ರಸ್ತೆಗಳು ಬೆರಳೆಣಿಕೆಯಲ್ಲಿ ಕಂಡುಬರುತ್ತವೆ. ಆದರೆ ಗುಣಮಟ್ಟದ ಕೊರತೆಯೇ ಇಲ್ಲಿಯ ಪ್ರಮುಖ ಸಮಸ್ಯೆ.
ಮೂಲ ಗುತ್ತಿಗೆದಾರರ ಬದಲು ಬೇನಾಮಿ, ಉಪ ಗುತ್ತಿಗೆದಾರರ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಕಾಮಗಾರಿ ಕಳಪೆಯಾಗಿವೆ ಎಂಬ ಅಸಮಾಧಾನ ಇಲ್ಲಿಯ ಜನರದ್ದು.
ದೋಟಿಹಾಳ ಬಳಿಯ ರಾಜ್ಯ ಹೆದ್ದಾರಿ, ಮುದೇನೂರು ರಸ್ತೆಯಲ್ಲಿ ಗುಂಡಿಗಳು ನಿರ್ಮಾಣಗೊಂಡು ಮಳೆಗಾಲದಲ್ಲಿ ನೀರಿನಿಂದ ಆವೃತವಾಗಿ ವಾಹನ ಸವಾರರು ಪರದಾಡುವುದು ಸಾಮಾನ್ಯವಾಗಿದೆ. ಪಟ್ಟಣದ ಸಂದೀಪ್ ನಗರದ ಬಳಿ ನಿರ್ಮಾಣಗೊಂಡಿರುವ ರಸ್ತೆ ವರ್ಷದೊಳಗೇ ಹಾಳಾಗಿ ಜನ ತೊಂದರೆ ಅನುಭವಿಸುವಂತಾಗಿದೆ.
ನಂದಾಪುರ ಹಾಗಲದಾಳದ ಮಧ್ಯದ ಸಂಪರ್ಕ ರಸ್ತೆಯ ಸಂಪೂರ್ಣ ಕಿತ್ತುಹೋಗಿದ್ದು ವಾಹನಗಳ ಅದರಲ್ಲೂ ಬೈಕ್ ಸವಾರರು ಫಜೀತಿಗೀಡಾಗುವಂತಾಗಿದೆ. ಕುಷ್ಟಗಿ ಟೆಂಗುಂಟಿ ಮಧ್ಯದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿ, ಕುಷ್ಟಗಿ ವಜ್ರಬಂಡಿ ರಸ್ತೆಗಳ ಸ್ಥಿತಿಯೂ ಅದೇ ಆಗಿದ್ದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂಬ ಕೊರಗು ಅಲ್ಲಿಯ ಜನರದು. ರಸ್ತೆ ಅವ್ಯವಸ್ಥೆಯನ್ನು ‘ಪ್ರಜಾವಾಣಿ’ ಕುಷ್ಟಗಿ ವರದಿಗಾರ ನಾರಾಯಣರಾವ ಕುಲಕರ್ಣಿ ಹಾಗೂ ತಾವರಗೇರಾ ವರದಿಗಾರ ಕೆ. ಶರಣಬಸವ ನವಲಹಳ್ಳಿ ಛಾಯಾಚಿತ್ರಗಳಲ್ಲಿ ಸೆರೆ ಹಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.