ADVERTISEMENT

ಭರವಸೆ ಮೂಡಿಸಿದ ಆಶ್ಲೇಷ, ರೈತರ ಹರ್ಷ

ಕುಷ್ಟಗಿ ತಾಲ್ಲೂಕಿನಲ್ಲಿ ಉತ್ತಮ ಮಳೆ; ಹಳ್ಳಕೊಳ್ಳಗಳಿಗೆ ತಂತು ಜೀವಕಳೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 6:51 IST
Last Updated 7 ಆಗಸ್ಟ್ 2025, 6:51 IST
ಕುಷ್ಟಗಿ ತಾಲ್ಲೂಕು ಬ್ಯಾಲಿಹಾಳ ಬಳಿ ಹಳ್ಳ ತುಂಬಿ ಹರಿಯುತ್ತಿದ್ದುದು ಬುಧವಾರ ಕಂಡುಬಂದಿತು
ಕುಷ್ಟಗಿ ತಾಲ್ಲೂಕು ಬ್ಯಾಲಿಹಾಳ ಬಳಿ ಹಳ್ಳ ತುಂಬಿ ಹರಿಯುತ್ತಿದ್ದುದು ಬುಧವಾರ ಕಂಡುಬಂದಿತು   

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ಬೆಳಗಿನ ಜಾವ ಧಾರಾಕಾರ ಮಳೆಯಾಗಿದ್ದು ಸಂಕಷ್ಟದ ಸ್ಥಿತಿಯಲ್ಲಿದ್ದ ಬೆಳೆಗಳು ಜೀವ ಬಂತಾಗಿದೆ.

ರಾತ್ರಿ 2 ಗಂಟೆಯಿಂದ ಸುಮಾರು ಮೂರು ತಾಸುಗಳವರೆಗೆ ಅಲ್ಲಲ್ಲಿ ರಭಸದಿಂದ ಮಳೆ ಬಂದಿದೆ. ಗಾಳಿ ಇಲ್ಲದ ಕಾರಣ ಮಳೆ ಧಾರಾಕಾರವಾಗಿ ಸುರಿದಿದ್ದು ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರಿದಿದ್ದು ಬುಧವಾರ ಮಧ್ಯಾಹ್ನದವರೆಗೂ ಹಳ್ಳಗಳಲ್ಲಿ ಹರಿವಿನ ಪ್ರಮಾಣ ಇತ್ತು. 

ಯಲಬುರ್ಗಾ, ಕುಷ್ಟಗಿ ತಾಲ್ಲೂಕುಗಳ ಗ್ರಾಮಗಳಲ್ಲಿ ಮಳೆ ಸುರಿದಿದ್ದರಿಂದ ಮದಲಗಟ್ಟಿ ಬಳಿಯ ನಿಡಶೇಸಿ ಕೆರೆಗೆ ಸಾಕಷ್ಟು ನೀರು ಬಂದಿದೆ. ಕೆರೆ ತುಂಬಿಸುವ ಯೋಜನೆಯಲ್ಲಿ ಕೃಷ್ಣಾ ನದಿ ನೀರು ಹೆಚ್ಚಿನ ಪ್ರಮಾಣದಲ್ಲಿ ಕೆರೆಗೆ ಹರಿದುಬಂದಿತ್ತು. ಈಗ ಮಳೆಯಿಂದ ಭರ್ತಿಯಾಗಿ ಕೋಡಿ ಅಂಚಿಗೆ ಬಂದು ತಲುಪಿದೆ. ಮುದೇನೂರು, ಜಾಲಿಹಾಳ, ತೆಗ್ಗಿಹಾಳ ಬಳಿಯ ಹಳ್ಳಗಳು ತುಂಬಿಹರಿದಿವೆ ಎಂದು ರೈತ ಶಂಕರಗೌಡ ಜಾಲಿಹಾಳ ಹೇಳಿದರು.

ADVERTISEMENT

ಇನ್ನಷ್ಟು ಮಳೆಯಾದರೆ ನಿಡಶೇಸಿ ಕೆರೆ ತುಂಬಿ ತುಳುಕಲಿದೆ ಎನ್ನಲಾಗಿದೆ. ಅಲ್ಲದೆ ಬುಧವಾರ ಸಂಜೆಯೂ ಸಹಿತ ಕುಷ್ಟಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಉತ್ತಮ ಮಳೆ ಬಂದಿದೆ.

ರೈತರ ಹರ್ಷ: ತೇವಾಂಶ ಕೊರತೆಯಿಂದ ಬಾಡಿ ನಿಂತಿದ್ದ ಮೆಕ್ಕೆಜೋಳ, ಸಜ್ಜೆ ಇತರೆ ಬೆಳೆಗಳಿಗೆ ಬಹಳಷ್ಟು ಅನುಕೂಲವಾಗಿದೆ. ಈ ಬಾರಿಯ ವಿಶೇಷವೆಂದರೆ ಬಿತ್ತನೆ ಸಮಯದಲ್ಲಿ ಮಳೆ ಏಕರೂಪವಾಗಿ ಸುರಿಯಿತು. ಈ ಹಿಂದೆಯೂ ಎಲ್ಲಕಡೆಯೂ ನಿರಂತರ ಮಳೆ ಸುರಿದಿತ್ತು. ಹಾಗಾಗಿ ರೈತರು ಬೆಳೆಗಳಿಗೆ ಸಾರಜನಕ ಗೊಬ್ಬರಕ್ಕಾಗಿ ಯೂರಿಯಾಕ್ಕೆ ಮೊರೆಹೋಗಿ ಮುಗಿಬಿದ್ದಿದ್ದರು. ಪರಿಣಾಮ ನಂತರ ಮಳೆಯಾಗದೆ ಬೆಳೆಗಳು ಬಾಡುವುದಕ್ಕೆ ಯೂರಿಯಾ ಬಳಕೆ ಪ್ರಮುಖ ಕಾರಣವಾಗಿತ್ತು. ಈಗ ಸರಿಯಾದ ಸಮಯದಲ್ಲಿ ಮಳೆಯಾಗಿರುವುದು ರೈತರ ಹರ್ಷ ಇಮ್ಮಡಿಸಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.