ಕುಷ್ಟಗಿ: ಪಟ್ಟಣದಿಂದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 21 ಕ್ವಿಂಟಲ್ ಅಕ್ಕಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಪಟ್ಟಣದ ಗುರುಭವನದ ಬಳಿ ಸೋಮವಾರ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಹೋಗುತ್ತಿದ್ದ ವಾಹನ ಬೆನ್ನಟ್ಟಿದ ಆಹಾರ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಪಡಿತರ ಯೋಜನೆಗೆ ಸೇರಿದ ಅಕ್ಕಿ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ವಿಚಾರಿಸುತ್ತಿದ್ದಂತೆ ಸರಕು ಸಾಗಣೆ ವಾಹನವನ್ನು ಅಲ್ಲಿಯೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಸುಮಾರು 60 ಪ್ಲಾಸ್ಟಿಕ್ ಚೀಲಗಳಲ್ಲಿ 21 ಕ್ವಿಂಟಲ್ ಅಕ್ಕಿಯನ್ನು ತುಂಬಲಾಗಿತ್ತು. ಆದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು ಇರಲಿಲ್ಲ. ಅಕ್ಕಿಯ ಮೌಲ್ಯ ₹ 50,000 ಎಂದು ಅಂದಾಜಿಸಲಾಗಿದೆ. ಈ ಕುರಿತು ಆಹಾರ ಇಲಾಖೆ ನಿರೀಕ್ಷಕ ರಮೇಶ ತಾಳಕೇರಿ ಎಂಬುವವರು ನೀಡಿದ ದೂರಿನ ಅನ್ವಯ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಕುರಿತು ವಿವರಿಸಿದ ರಮೇಶ ತಾಳಕೇರಿ, ‘ಅಕ್ಕಿ ಪಡಿತರ ಯೋಜನೆಯದ್ದು ಎಂಬುದು ಖಾತರಿಯಾಗಿದೆ. ಆದರೆ ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದು ಗೊತ್ತಾಗಿಲ್ಲ. ತನಿಖೆ ನಂತರ ಅದರ ಮಾಹಿತಿ ಹೊರಬರಲಿದ್ದು, ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಹೇಳಿದರು.
ಇಳಕಲ್, ಗಂಗಾವತಿ, ಸಿಂಧನೂರು ಸೇರಿದಂತೆ ಬೇರೆ ಬೇರೆ ಕಡೆಗಳಿಗೆ ಪಡಿತರ ಅಕ್ಕಿಯ ಅಕ್ರಮ ಸಾಗಣೆ ನಡೆಯುತ್ತಿದ್ದು, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಪ್ರಭಾವಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ. ಆಹಾರ ಇಲಾಖೆ ಮತ್ತು ಪೊಲೀಸರು ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.