ಕುಷ್ಟಗಿ: ಬಹಿರಂಗ ಹರಾಜು ಮಾಡದೆ ಪುರಸಭೆಯ ಗಮನಕ್ಕೆ ಬಾರದ ರೀತಿಯಲ್ಲಿ ಸಂತೆ ಮೈದಾನದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಅಲ್ಪ ಮೊತ್ತದ ಬಾಡಿಗೆ ನಿಗದಿಪಡಿಸಿದ್ದಲ್ಲದೇ 12 ವರ್ಷಗಳವರೆಗೂ ಲೀಸ್ ನೀಡಿದ ಪ್ರಕರಣ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಆದರೆ ಸಾಮಾನ್ಯ ಸಭೆಯಲ್ಲಿ ಮಳಿಗೆಗಳ ವಿಷಯ ಚರ್ಚೆಯಾಗದಿದ್ದರೂ ನಾಲ್ಕು ವರ್ಷಗಳ ನಂತರ ಈಗ ಠರಾವು ಪುಸ್ತಕದಲ್ಲಿ ಸೇರ್ಪಡೆ ಮಾಡಲು ಕೆಲ ಸದಸ್ಯರು ಹುನ್ನಾರ ನಡೆಸಿರುವುದು ಗೊತ್ತಾಗಿದೆ.
ಸರ್ಕಾರದ ನಿಯಮ ಉಲ್ಲಂಘಿಸಿ, ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮಳಿಗೆಗಳು ಸ್ವಂತ ಆಸ್ತಿ ಎಂಬಂತೆ ತಮಗೆ ವ್ಯಾಪಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದು ನಕಲಿ ದಾಖಲೆಗಳ ಮೂಲಕ ಅಕ್ರಮ ಎಸಗಿರುವುದು ಸ್ಪಷ್ಟವಾಗಿದ್ದು ಕೆಲ ಸದಸ್ಯರೊಂದಿಗೆ ಪುರಸಭೆಯ ಕೆಲ ಸಿಬ್ಬಂದಿಯೂ ಅಕ್ರಮಕ್ಕೆ ಕೈಜೋಡಿಸಿದ್ದಾರೆ ಎಂದೆ ಪುರಸಭೆ ಮೂಲಗಳು ತಿಳಿಸಿವೆ. ಅಲ್ಲದೆ ಠರಾವು ಪುಸ್ತಕದಲ್ಲಿ ಮಳಿಗೆ ಬಾಡಿಗೆ ವಿಷಯವನ್ನು ಸೇರಿಸುವಂತೆ ಸಿಬ್ಬಂದಿ ಮೇಲೆ ಮಾಜಿ ಅಧ್ಯಕ್ಷರೊಬ್ಬರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
2 ಬಾರಿ ನೋಟಿಸ್: ಈ ಮಧ್ಯೆ ಅನಧಿಕೃತವಾಗಿ ಮಳಿಗೆಗಳನ್ನು ದೀರ್ಘಾವಧಿವರೆಗೆ ಬಾಡಿಗೆ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಹಿಂದಿನ ಮುಖ್ಯಾಧಿಕಾರಿ ಉಮೇಶ ಹಿರೇಮಠ ಎಂಬುವವರಿಗೆ ಕಾರಣ ಕೇಳಿ ಆ.೪ ರಂದು ನೋಟಿಸ್ ನೀಡಲಾಗಿತ್ತು. ಉತ್ತರ ಬಾರದ ಕಾರಣ ಪುನಃ ಆ.11 ರಂದು ಎರಡನೇ ಬಾರಿ ನೋಟಿಸ್ ನೀಡಲಾಗಿದೆ. ಬಹಿರಂಗ ಹರಾಜಿಲ್ಲದೆ 12 ವರ್ಷಗಳವರೆಗೆ ಸಂತೆ ಮೈದಾನದ ಮಳಿಗೆಗಳ ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದರೂ ಒಪ್ಪಂದದ ದಾಖಲೆ ಇಲ್ಲ, ಠೇವಣಿಯೂ ಬಂದಿಲ್ಲ ಅಲ್ಲದೆ 2021ರ ಜು.9 ರಂದು ಅಧ್ಯಕ್ಷ ಜಿ.ಕೆ.ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಾಮಾನ್ಯ ಸಭೆಯ ಠರಾವು ಪುಸ್ತಕದಲ್ಲಿ ಈ ವಿಷಯವೇ ಚರ್ಚೆಗೆ ಬಂದಿಲ್ಲ, ಅದಕ್ಕೆ ಸಂಬಂಧಿಸಿದ ಒಂದೂ ದಾಖಲೆ ಇಲ್ಲ. ಹಾಗಾಗಿ ವಿವರಗಳೊಂದಿಗೆ ಸಂಬಂಧಿಸಿದ ದಾಖಲೆಗಳನ್ನೂ ಒದಗಿಸುವಂತೆ ನೋಟಿಸ್‌ದಲ್ಲಿ ತಿಳಿಸಲಾಗಿತ್ತು. ಆದರೆ ಆ.14 ರಂದು ಉಮೇಶ ಹಿರೇಮಠ ಅವರು ಉತ್ತರ ನೀಡಿದ್ದರೂ ನೋಟಿಸ್‌ದಲ್ಲಿರುವ ಅಂಶಗಳಿಗೆ ತಾಳೆಯಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.